ನವದೆಹಲಿ: ಕಾಂಗ್ರೆಸ್ ತನ್ನ ಪ್ರತೀಕಾರ ಪ್ರತಿಭಟನೆಯನ್ನು ಬಿಟ್ಟು ಕಡೆಯ ನಾಲ್ಕು ದಿನವಾದರೂ ಸಂಸತ್ತು ಅಧಿವೇಶನ ನಡೆಯಲು ಅವಕಾಶ ಮಾಡಿಕೊಡಬೇಕು ಎಂದು ಕೇಂದ್ರ ಸಚಿವ ವೆಂಕಯ್ಯನಾಯ್ಡು ಶುಕ್ರವಾರ ಹೇಳಿದ್ದಾರೆ.
ಪ್ರಸ್ತುತ ವಿವಾದದಲ್ಲಿರುವ ವಿಷಯಗಳು ಹಾಗೂ 25 ಕಾಂಗ್ರೆಸ್ ಸದಸ್ಯರನ್ನು ಅಮಾನತು ಮಾಡಿರುವುದ ಕುರಿತಂತೆ ಬಿಜೆಪಿ ಸ್ಪಷ್ಟನೆ ನೀಡಲು ಸಿದ್ಧವಿದ್ದರೂ ಅದನ್ನು ಕೇಳಲು ಕಾಂಗ್ರೆಸ್ ಪಕ್ಷವೇ ಸಿದ್ದವಿಲ್ಲ. ಅಧಿವೇಶನ ಸರಿಯಾದ ರೀತಿಯಲ್ಲಿ ನಡೆಯಲು ಬಿಟ್ಟರೆ ಬಿಜೆಪಿ ವಿವಾದ ಕುರಿತಂತೆ ಸ್ಪಷ್ಟನೆ ನೀಡಲು ತಯಾರಿದೆ ಎಂದು ಹೇಳಿದ್ದಾರೆ.
ಇದೇ ಮುಖಂಡರ ಅಮಾನತು ಸಮರ್ಥಿಸಿಕೊಂಡಿರುವ ಅವರು, ಅಧಿವೇಶನ ಸರಿಯಾದ ನೀಡಲು ಅಡ್ಡಿಯುಂಟಾದಾಗ ಸ್ಪೀಕರ್ ಈ ರೀತಿಯಾದ ಕಠಿಣ ನಿಲುವು ತಾಳಲೇಬೇಕಾಗಿರುತ್ತದೆ. ಅಧಿವೇಶನ ನಡೆಯುವ ಸಲುವಾಗಿ ಸ್ಪೀಕರ್ ಈ ರೀತಿಯ ನಿರ್ಧಾರ ತೆಗೆದುಕೊಂಡಿದ್ದಾರೆ. ಸ್ಪೀಕರ್ ಅವರ ಈ ಕ್ರಮವನ್ನು ಸೋನಿಯಾ ಗಾಂಧಿ ಅವರು ಕರಾಳ ಹಾಗೂ ಕಪ್ಪು ಛಾಯೆ ದಿನ ಎಂದು ಉಲ್ಲೇಖಿಸಿದ್ದಾರೆ. ಅಧಿವೇಶನದ ಪ್ರಾರಂಭದ ದಿನದಿಂದಲೂ ಸಂಸತ್ತಿನಲ್ಲಿ ಕಪ್ಪು ಛಾಯೆಯೇ ಸುತ್ತಿಕೊಂಡಿದಯೇ ಹೊರತು ಪ್ರಾರಂಭವಾದಾಗಿನಿಂದಲೂ ಎಂದಿಗೂ ಬಿಳಿ ಛಾಯೆ ಸುತ್ತಿರುವ ವಾತಾವರಣ ಆರಂಭವಾಗಲೇ ಇಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಮನವಿ ಮಾಡಿರುವ ವೆಂಕಯ್ಯನಾಯ್ಡು, ಸೋನಿಯಾ ಗಾಂಧಿ ಅವರ ಬಗ್ಗೆ ನನಗೆ ಗೌರವವಿದೆ. ರಾಷ್ಟ್ರೀಯ ಹಿತಾಸಕ್ತಿಗೆ ತೊಂದರೆ ನೀಡದೆ, ದೇಶದ ಪ್ರಗತಿಗೆ ತಡೆಯೊಡ್ಡದೇ ಸಂಸತ್ತು ಅಧಿವೇಶನ ಶಾಂತಿಯುತವಾಗಿ ನಡೆಯಲು ಅವಕಾಶ ಮಾಡಿಕೊಡಬೇಕಿದ್ದು, ಸುಷ್ಮಾ ಸ್ವರಾಜ್ ಸ್ಪಷ್ಟನೆ ನೀಡಲು ಅವಕಾಶ ನೀಡಬೇಕೆಂದು ಕೇಳಿಕೊಂಡಿದ್ದಾರೆ.