ನವದೆಹಲಿ: ದೇಶದ್ರೋಹ ಆರೋಪ ಹೊತ್ತಿರುವ ಐಪಿಎಲ್ ಮಾಜಿ ಆಯುಕ್ತ ಲಲಿತ್ ಮೋದಿ ಪ್ರವಾಸಕ್ಕೆ ಬೇಕಾದ ದಾಖಲೆ ಒದಗಿಸುವಂತೆ ಬ್ರಿಟಿಷ್ ಸರ್ಕಾರಕ್ಕೆ ಯಾವುದೇ ರೀತಿಯ ಮನವಿಯನ್ನಾಗಲಿ, ಶಿಫಾರಸನ್ನಾಗಲಿ ಮಾಡಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಲೋಕಸಭೆಯಲ್ಲಿ ಸ್ಪಷ್ಟ ಪಡಿಸಿದ್ದಾರೆ. ಪ್ರತಿಪಕ್ಷಗಳ ಸದಸ್ಯರ ಗೈರು ಹಾಜರಿ
ಯಲ್ಲಿ ಹದಿನೈದು ನಿಮಿಷ ಭಾವೋದ್ವೇಗ ದಿಂದ ಮಾತನಾಡಿದ ಸುಷ್ಮಾ ಸ್ವರಾಜ್, ``ನಾನು ಈ ಸದನದಲ್ಲಿ ನಿಂತು ಜವಾಬ್ದಾರಿ ಯಿಂದ ಹೇಳುತ್ತಿದ್ದೇನೆ. ನನ್ನ ಮೇಲೆ ಪ್ರತಿಪಕ್ಷಗಳು ಮಾಡುತ್ತಿರುವ ಆರೋಪ ತಪ್ಪು, ಅಸತ್ಯ ಮತ್ತು ನಿರಾಧಾರ'' ಎಂದರು. ``ನಾನು ಯಾವತ್ತೂ ಬ್ರಿಟನ್ ಸರ್ಕಾರಕ್ಕೆ ಲಲಿತ್ ಮೋದಿ ಪ್ರವಾಸಕ್ಕೆ ಬೇಕಾದ ದಾಖಲೆ ಒದಗಿಸುವಂತೆ ಮನವಿಯನ್ನೂ ಮಾಡಿಲ್ಲ. ಶಿಫಾರಸನ್ನೂ ಮಾಡಿಲ್ಲ. ಒಂದು ವೇಳೆ ಮನವಿ ಅಥವಾ ಶಿಫಾರಸುಮಾಡಿದ ಬಗ್ಗೆ ಒಂದೇ ಸಣ್ಣ ಕಾಗದದ ತುಂಡು, ಅದರ ನೆರಳಾಗಲೀ, ಇಮೇಲ್ ಆಗಲೀ ಪ್ರಸ್ತುತ ಪಡಿಸಲಿ. ನಾನು ನೆರವು ನೀಡಿದ್ದು, ಕ್ಯಾನ್ಸರ್‍ನಿಂದ ಬಳಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಲಲಿತ್ ಮೋದಿ ಪತ್ನಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು, ಶಸ್ತ್ರ ಚಿಕಿತ್ಸೆ ಜೀವನ್ಮರಣದ್ದಾಗಿದ್ದು, ಹಾಜರಿರಬೇಕು ಎಂದು ಸೂಚಿಸಿದ್ದರು. ಅದರಂತೆ ಲಲಿತ್ ಪತ್ನಿಯೂ ಬ್ರಿಟನ್ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.
ಈ ಹಂತದಲ್ಲಿ ಲಲಿತ್‍ಮೋದಿ ಪೋರ್ಚುಗಲ್ ಗೆ ಪ್ರಯಾಣಿಸಲು ಅಗತ್ಯ ದಾಖಲೆ ಒದಗಿಸಿದ ರೆ ನಮ್ಮ ಬಾಂಧವ್ಯಕ್ಕೆ ಅಡ್ಡಿಯಿಲ್ಲ ಎಂದಿದ್ದಾರೆ ಅಷ್ಟೆ ಎಂದು ಸ್ವರಾಜ್ ಪ್ರತಿಪಾದಿಸಿದ್ದರು.
ಸೋನಿಯಾ ಏನು ಮಾಡುತ್ತಿದ್ದರು?: ``ಜೀವನ್ಮರಣ ಹೋರಾಟ ನಡೆಸುತ್ತಿದ್ದಲಲಿತ್ ಪತ್ನಿ ಭಾರತೀಯ ನಾಗರಿಕಳು. ಅಂತಹ ಮಹಿಳೆಗೆ ಮಾನವೀಯತೆಯಿಂದ
ನೆರವಾಗಿದ್ದೇನೆ. ಇಂತಹ ಪರಿಸ್ಥಿತಿಯಲ್ಲಿ ನೀವೇ(ಸ್ಪೀಕರ್ ) ಇದ್ದರೆ ಏನು ಮಾಡುತ್ತಿದ್ದಿರಿ? ಸೋನಿಯಾ ಗಾಂಧಿ ಅವರೇ ಇದ್ದರೆ ಏನು ಮಾಡುತ್ತಿದ್ದರು?'' ಎಂದು ಭಾವುಕತೆಯಿಂದ ಪ್ರಶ್ನಿಸಿದ ಸುಷ್ಮಾ, ``ಅಸಹಾಯಕ ಮಹಿಳೆಗೆ ಮಾನವೀಯತೆ ನೆರವು ನೀಡುವುದೇ ಅಪರಾಧ ಎನ್ನುವುದಾದರೆ, ಸದನದಲ್ಲಿ ನಿಂತು ರಾಷ್ಟ್ರದ ಮುಂದೆ ನಾನು ಅಪರಾಧ ಮಾಡಿದ್ದೇನೆ ಎಂದು ಒಪ್ಪಿಕೊಳ್ಳುತ್ತೇನೆ. ಸಭಾಧ್ಯಕ್ಷರೆ ನನಗೆ ಏನು ಶಿಕ್ಷೆ ಕೊಟ್ಟರೂ ಅನುಭವಿಸಲು ಸಿದ್ಧ ಮತ್ತಷ್ಟು ಭಾವೋದ್ವೇಗದಿಂದ'' ಹೇಳಿ ಕುಳಿತರು. ಆಡಳಿತ ಪಕ್ಷದ ಸದಸ್ಯರು ಮೇಜುಕುಟ್ಟಿ ಸುಷ್ಮಾ ಅವರನ್ನು ಬೆಂಬಲಿಸಿದರು.
ನಡೆಯಿತು ಕಲಾಪ: ಕಾಂಗ್ರೆಸ್, ಎನ್‍ಸಿಪಿ, ಆರ್‍ಜೆಡಿ, ಎಸ್‍ಪಿ, ಸಿಪಿಎಂ ಸಂಸದರು ಗೈರು ಹಾಜರಾಗಿದ್ದರಿಂದ ಲೋಕಸಭೆ ಕಲಾಪಗಳು ಸುಗಮವಾಗಿ ನಡೆದವು. ಇದೇ ವೇಳೆ ಸಂಸತ್ ಭವನದ ಹೊರಗೆ ಕಾಂಗ್ರೆಸ್ ಮತ್ತಿತರ ಪಕ್ಷಗಳ ಸದಸ್ಯರು ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಿದರು.
ಜೀವನ್ಮರಣ ಹೋರಾಟ ನಡೆಸುತ್ತಿದ್ದ ಲಲಿತ್ ಪತ್ನಿ ಭಾರತೀಯ ನಾಗರಿಕಳು. ಅಂತಹ ಮಹಿಳೆಗೆ ಮಾನವೀಯತೆಯಿಂದ ನೆರವಾಗಿದ್ದೇನೆ. ಇಂತಹ ಪರಿಸ್ಥಿತಿಯಲ್ಲಿ ನೀವೇ(ಸ್ಪೀಕರ್) ಇದ್ದರೆ ಏನು ಮಾಡುತ್ತಿದ್ದಿರಿ? ಸೋನಿಯಾಗಾಂಧಿ ಅವರೇ ಇದ್ದರೆ ಏನು ಮಾಡುತ್ತಿದ್ದರು?
- ಸುಷ್ಮಾ ಸ್ವರಾಜ್, ವಿದೇಶಾಂಗ ಸಚಿವೆ