ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಾಜಿ ಐಪಿಎಲ್ ಮುಖ್ಯಸ್ಥ ಲಲಿತ್ ಮೋದಿ ಅವರಿಂದ ಹಣ ಪಡೆದಿದ್ದಾರೆಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ಆರೋಪ ವ್ಯಕ್ತಪಡಿಸಿದ್ದಾರೆ.
ಲಲಿತ್ ಮೋದಿ ಅಕ್ರಮ ವಲಸೆ ಪ್ರಕರಣ ಸಂಬಂಧ ಈಗಾಗಲೇ ಎನ್ ಡಿಎ ಸರ್ಕಾರ ಮುಖಂಡರ ವಿರುದ್ಧ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್, ಸಂಸತ್ತಿನ ಹೊರಗೆ ಪ್ರತಿಭಟನೆಗಿಳಿದಿದ್ದು, ಪ್ರತಿಭಟನೆ ವೇಳೆ ರಾಹುಲ್ ಗಾಂಧಿ ಅವರು ಮಾತನಾಡಿ ಕಳ್ಳತನ ಪ್ರಕರಣ ನಡೆದಿದೆ ಎಂದಾದ ಮೇಲೆ ಅಲ್ಲಿ ಹಣ ವರ್ಗಾವಣೆ ಆಗಿಯೇ ಇರುತ್ತದೆ ಎಂಬುದು ಸಾಮಾನ್ಯ ವಿಷಯ. ಲಲಿತ್ ಮೋದಿ ಪ್ರಕರಣದಲ್ಲೂ ಕಳ್ಳತನಕ್ಕೆ ಬೆಂಬಲ ಸೂಚಿಸುವವರಿಗೆ ಹಣದ ವರ್ಗಾವಣೆ ಆಗಿಯೇ ಇರುತ್ತದೆ. ಸುಷ್ಮಾ ಸ್ವರಾಜ್ ಸಹ ಮೋದಿ ಅವರಿಂದ ಹಣ ಪಡೆದಿದ್ದಾರೆ ಎಂದು ಹೇಳಿದ್ದಾರೆ.
ಕಳ್ಳತನವಾದಾಗ ಕಳ್ಳತನದ ರಹಸ್ಯ ಕಳ್ಳರಿಗೆ ಮಾತ್ರವೇ ತಿಳಿದಿರುತ್ತದೆ. ಹಾಗಾಗಿ ಈ ರಹಸ್ಯವನ್ನು ಕಾಪಾಡುವವರು ಕಳ್ಳರೇ ಆಗಿರುತ್ತಾರೆ. ಲಲಿತ್ ಮೋದಿ ಪ್ರಕರಣದಲ್ಲೂ ಸುಷ್ಮಾ ಕಳ್ಳರಾಗಿದ್ದು, ಕಳ್ಳತನದ ರಹಸ್ಯವನ್ನು ಅವರೇ ಮುಚ್ಚಿಟ್ಟಿದ್ದಾರೆ. ಲಲಿತ್ ಮೋದಿ ಅವರನ್ನು ಜೈಲಿಗೆ ಹೋಗದಂತೆ ಮಾಡಲು ಸುಷ್ಮಾ ಲಲಿತ್ ಮೋದಿ ಅವರಿಂದ ಎಷ್ಟು ಹಣ ಪಡೆದಿದ್ದಾರೆಂಬುದನ್ನು ಹಾಗೂ ಪ್ರಕರಣದಲ್ಲಿ ಏನಾಗಿದೆ ಎಂಬುದನ್ನು ಅವರೇ ಹೇಳಬೇಕಿದೆ ಎಂದು ಹೇಳಿದ್ದಾರೆ.