ನವದೆಹಲಿ: ಆಕಸ್ಮಿಕವಾಗಿ ಪಾಕಿಸ್ತಾನಕ್ಕೆ ಸೇರಿದ್ದ ಮಾತುಬಾರದ, ಕಿವಿ ಕೇಳದ ಭಾರತೀಯ ಮೂಲದ ಯುವತಿ ಗೀತಾ ಕುರಿತಂತೆ ಈಗಾಗಲೇ ನಾಲ್ಕು ರಾಜ್ಯದ ಕುಟುಂಬಗಳು ತಮ್ಮ ಮಗಳೆಂದು ಹೇಳಿಕೊಂಡ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ನಾಲ್ಕು ರಾಜ್ಯದ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದ್ದು, ಪ್ರಕರಣ ಕುರಿತಂತೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಭಾನುವಾರ ಹೇಳಿದ್ದಾರೆ ಎಂದು ತಿಳಿದುಬಂದಿದೆ.
11ನೇ ವಯಸ್ಸಿನಲ್ಲಿ ಗೀತಾ ಭಾರತದ ಗಡಿ ದಾಳಿ ಪಾಕಿಸ್ತಾನ ಗಡಿಗೆ ಪ್ರವೇಶಿಸಿದ್ದಳು. ಇದೀಗ ಆಕೆಗೆ 20 ವರ್ಷವಾಗಿದ್ದು, ಇತ್ತೀಗಷ್ಟೇ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಭಜರಂಗಿ ಭಾಯ್ ಜಾನ್ ಸಿನಿಮಾ ಬಿಡುಗಡೆಯಾದ ಬಳಿಕ ಯುವತಿ ಕುರಿತಂತೆ ಮಾಹಿತಿಗಳು ಹೊರ ಬಂದಿದ್ದವು. ಇದೀಗ ಯುವತಿಯನ್ನು ಭಾರತಕ್ಕೆ ಕರೆತರಲು ಭಾರತೀಯ ರಾಯಭಾರಿ ಕಚೇರಿ ಮುಂದಾಗಿದ್ದು, ಯುವತಿ ನಮ್ಮವಳು ಎಂದು ಹೇಳಿ ಇದೀಗ ಪಂಜಾಬ್, ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶಕ ನಾಲ್ಕು ಕುಟುಂಬಗಳು ಹೇಳಿಕೊಳ್ಳತೊಡಗಿವೆ. ಹೀಗಾಗಿ ಪ್ರಕರಣ ಸಂಬಂಧ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ನಾಲ್ಕು ರಾಜ್ಯ ಮುಖ್ಯಮಂತ್ರಿಗಳಿಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸೂಚನೆ ನೀಡಿದ್ದಾರೆ.
ಪ್ರಕರಣ ಕುರಿತಂತೆ ಈಗಾಗಲೇ ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಸುಷ್ಮಾ ಸ್ವರಾಜ್ ಅವರು, ಪ್ರಸ್ತುತ ಗೀತಾ ಕರಾಚಿಯ ಈದಿ ಫೌಂಡೇಶನ್ ನಡೆಸುತ್ತಿರುವ ಆನಾಥಶ್ರಮದಲ್ಲಿದ್ದಾಳೆ. ಯುವತಿ ನಮ್ಮವಳೆಂದು ಇದೀಗ ನಾಲ್ಕು ರಾಜ್ಯ ಕುಟುಂಬಗಳು ಹೇಳಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತಂತೆ ಪರಿಶೀಲನೆ ನಡೆಸಿ ಆಯಾ ರಾಜ್ಯಗಳ ಮುಖ್ಯಮಂತ್ರಿಗಳು ವರದಿ ಸಲ್ಲಿಸುವಂತೆ ಮನವಿ ಮಾಡಲಾಗಿದೆ. ಗೀತಾಳನ್ನು ಭಾರತಕ್ಕೆ ಕರೆತರಲು ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ಗೀತಾಳನ್ನು ಮಂಗಳವಾರ ಭಾರತದ ಹೈ ಕಮಿಷನರ್ ಟಿ.ಸಿ.ಎ.ರಾಘವನ್ ಅವರು ಭೇಟಿ ಮಾಡಿದ್ದರು, ಈ ವೇಳೆ ಗೀತಾ ಕೈ ಸಂಕೇತದ ಮೂಲಕ ತನ್ನ ಮಾಹಿತಿ ನೀಡಿದ್ದು, ತನಗೆ 7 ಮಂದಿ ಸಹೋದರ ಮತ್ತು ಸಹೋದರಿಯರಿದ್ದರು. 15 ವರ್ಷಗಳಿಂದ ಪಾಕಿಸ್ತಾನದಲ್ಲಿದ್ದೇನೆ. ತಂದೆಯ ಜೊತೆ ದೇವಾಲಯಕ್ಕೆ ಹೋಗುತ್ತಿದ್ದೆ, ದೇವಾಲಯದ ಹೆಸರು ವೈಷ್ಣೋದೇವಿ ಎಂದು ಹೇಳಿದ್ದಾರೆ. ಗೀತಾ ಮಾಹಿತಿಯನ್ನು ಇದೀಗ ರಾಘವನ್ ಅವರು ಟ್ವೀಟ್ ಮಾಡಿದ್ದು, ಗೀತಾ ಕುಟುಂಬ ಸದಸ್ಯರನ್ನು ಪತ್ತೆ ಮಾಡಲು ನೆರವಾಗುವಂತೆ ಮನವಿ ಮಾಡಿದ್ದಾರೆ.