ಮುಂಬೈ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಿಂದ ದೂರವಿರುವಂತೆ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರಿಗೆ ಜೀವ ಬೆದರಿಕೆ ಪತ್ರವೊಂದು ಬಂದಿರುವುದಾಗಿ ಮಂಗಳವಾರಿ ತಿಳಿದುಬಂದಿದೆ.
ಅಣ್ಣಾ ಹಜಾರೆ ಅವರಿಗೆ ರವಾನೆಯಾಗಿರುವ ಪತ್ರದಲ್ಲಿ ಆಗಸ್ಟ್ 7 ದಿನಾಂಕವಿದ್ದು, ಆಂಗ್ಲ ಭಾಷೆಯಲ್ಲಿ ಪತ್ರಬರೆಯಲಾಗಿದೆ ಎಂದು ತಿಳಿದುಬಂದಿದೆ. ಪತ್ರದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಸಹವಾಸ ಬಿಟ್ಟು ನಿಮ್ಮ ಹುಟ್ಟೂರು ರಾಲೆ ಗಣಸಿದ್ದಿಗೆ ಹೋಗಿ ನೆಲೆಸಿ. ಇಲ್ಲದೇ ಹೋದರೆ ಸಾಮಾಜಿಕ ಹೋರಾಟಗಾರ ನರೇಂದ್ರ ದಾಭೋಲ್ಕರ್ ಗೆ ಆದ ಗತಿಯೇ ನಿಮಗೂ ಆಗುತ್ತದೆ ಎಂದು ಹೇಳಲಾಗಿದೆ.
ಹೋರಾಟಗಾರ ದಾಭೋಲ್ಕರ್ ಅವರನ್ನು ಅಪರಿಚಿತ ವ್ಯಕ್ತಿಗಳು ಹಾಡಹಗಲೇ ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಪ್ರಕರಣವನ್ನು ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಗಳಿಗಾಗಿ ಹುಡುಕಾಟ ಮುಂದುವರೆದಿದೆ.
ಅಣ್ಣಾ ಹಜಾರೆಗೆ ಬಂದ ಬೆದರಿಕೆ ಪತ್ರದ ಕುರಿತಂತೆ ಇದೀಗ ಮುಂಬೈನ ಪಾರ್ನರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.