ತಿರುಪತಿ: ಆಂಧ್ರಪ್ರದೇಶ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಬೇಕೆಂದು ಆಗ್ರಹಿಸಿ ಆಂಧ್ರಪ್ರದೇಶದಾದ್ಯಂತ ಮಂಗಳವಾರ ಬಂದ್ ಆಚರಿಸಲಾಗುತ್ತಿದೆ.
ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಎಲ್ಲಾ ಪ್ರಯತ್ನಗಳು ಆಂಧ್ರಪ್ರದೇಶದಲ್ಲಿ ನಡೆಯುತ್ತಿದ್ದು, ವಿಶೇಷ ಸ್ಥಾನಮಾನ ಕೋರಿ ಸಿಪಿಐ ಹಾಗೂ ಸಿಪಿಎಂ ಪಕ್ಷ ನೀಡಿರುವ ಬಂದ್ ಕರೆಗೆ ಈಗಾಗಲೇ ಸಾಕಷ್ಟು ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿದ್ದು, ಆಂಧ್ರಪ್ರದೇಶದಾದ್ಯಂತ ವಾಣಿಜ್ಯವಹಿವಾಟುಗಳು ಸ್ಥಗಿತಗೊಂಡಿದೆ
ಬಂದ್ ಹಿನ್ನೆಲೆಯಲ್ಲಿ ಹೋಟೆಲ್, ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಕಾಲೇಜು ಹಾಗೂ ಶಾಲೆಗಳಿಗೆ ರಜೆ ಘೋಷಣೆ ಮಾಡಿದೆ. ಈಗಾಗಲೇ ಸರ್ಕಾರಿ ಹಾಗೂ ಖಾಸಗಿ ಬಸ್ ಗಳು ಸ್ಥಗಿತಗೊಂಡಿದ್ದು, ಬೇರೆ ರಾಜ್ಯಗಳಿಗೆ ಹೋಗುವ ಸಾರ್ವಜನಿಕರು ಪರದಾಡುವಂತಾಗಿದೆ. ವಿಶೇಷ ಸ್ಥಾನಮಾನ ಕೋರಿ ಈಗಾಗಲೇ ಟಿಡಿಪಿ, ಸಿಪಿಐ, ಸಿಪಿಎಂ ಪಕ್ಷದ ಕಾರ್ಯಕರ್ತರು ಆಂಧ್ರಪ್ರದೇಶದಾದ್ಯಂತ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಬಂದ್ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ಕೇಂದ್ರ ಸರ್ಕಾರ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುತ್ತದೆ ಎಂಬುದರ ಬಗ್ಗೆ ನನಗೆ ನಂಬಿಕೆಯಿದೆ. ಆಂಧ್ರಪ್ರದೇಶದ ಜನತೆ ಬಳಿ ನಾನು ಕೇಳಿಕೊಳ್ಳುವುದಿಷ್ಟೇ ವಿಶೇಷ ಸ್ಥಾನಮಾನದ ಕುರಿತಂತೆ ಜನರು ಭಾವನಾತ್ಮಕವಾಗಬೇಡಿ ಮತ್ತು ಕೆಟ್ಟ ನಿರ್ಧಾರವನ್ನು ಕೈ ಗೊಳ್ಳಬೇಡಿ ಎಂದು ಹೇಳಿದ್ದಾರೆ.