ಇಂದೋರ್: ಇಂದೋರ್ ನ ಖಾಂಡ್ವಾದಲ್ಲಿ ಇಸ್ಲಾಂ ಮತಕ್ಕೆ ಸೇರಿದ ವ್ಯಕ್ತಿಯೊಬ್ಬರು ಶಿವನ ದೇವಾಲಯದ ಉಸ್ತುವಾರಿ ವಹಿಸಿಕೊಂಡಿದ್ದು ಕೋಮು ಸಾಮರಸ್ಯಕ್ಕೆ ಮಾದರಿಯಾಗಿದ್ದಾರೆ.
ಮೊಹಮ್ಮದ್ ಜಹೀರ್ ಎಂಬುವವರು, ದರ್ಗಾ ಹಾಗೂ ಶಿವನ ದೇವಾಲಯವನ್ನು ಸಮಾನ ದೃಷ್ಟಿಯಿಂದ ನೋಡುತ್ತಿದ್ದು, ಎರಡೂ ಧಾರ್ಮಿಕ ಕೇಂದ್ರಗಳನ್ನು ಕಾವಲು ಕಾಯುತ್ತಿದ್ದಾರೆ. ಖಾಸಗಿ ಮಾಧ್ಯಮವೊಂದರಲ್ಲಿ ಪ್ರಕಟವಾದ ವರದಿ ಪ್ರಕಾರ, ಮೊಹಮ್ಮದ್ ಜಹೀರ್ ಕಳೆದ ಆರು ವರ್ಷಗಳಿಂದ ಶಿವನ ದೇವಾಲಯವನ್ನು ನಿತ್ಯವೂ ಸ್ವಚ್ಛಗೊಳಿಸಿ, ಅಲಂಕರಿಸುವ ಕೆಲಸ ಮಾಡುತ್ತಿದ್ದಾರೆ. ಇಂದೋರ್ ನಲ್ಲಿರುವ ಶಿವನ ದೇವಾಲಯ ಭಾರತೀಯ ಪುರಾತತ್ವ ಇಲಾಖೆ ವ್ಯಾಪ್ತಿಗೆ ಬರಲಿದ್ದು, ಇಲಾಖೆಯಿಂದ ಮೊಹಮ್ಮದ್ ನನ್ನು ನೇಮಿಸಲಾಗಿದೆ.
ಈ ದೇವಾಲಯದಲ್ಲಿ ಪೂಜೆ ನಿರ್ವಹಿಸಲು ಯಾವುದೇ ಪುರೋಹಿತರಿಲ್ಲ. ಪ್ರವಾಸಿಗರು ಬಂದ ಸಂದರ್ಭದಲ್ಲಿ ಶಿವಲಿಂಗಕ್ಕೆ ಸ್ವತಃ ಮೊಹಮ್ಮದ್ ಅರ್ಚನೆ ಮಾಡುವ ಮೂಲಕ ಸಹಾಯ ಮಾಡುತ್ತಾರೆ. ಇದೇ ವೇಳೆ ಈತ ದೇವಸ್ಥಾನದ ಬಳಿ ಇರುವ ಪುರಾತತ್ವ ಇಲಾಖೆ ವ್ಯಾಪ್ತಿಗೆ ಬರುವ ದರ್ಗಾದಲ್ಲೂ ಕೆಲಸ ಮಾಡುತ್ತಿದ್ದಾರೆ. ದರ್ಗಾ ಹಾಗೂ ದೇವಾಲಯದಲ್ಲಿ ಕೆಲಸ ಮಾಡುವುದರಿಂದ ತನ್ನ ಮುಂದಿನ ಪೀಳಿಗೆಗೆ ಸಮಾನತೆ ಮತ್ತು ಸಾಮರಸ್ಯವನ್ನು ಕಲಿಸಿದಂತಾಗುತ್ತದೆ ಎಂದು ಮೊಹಮ್ಮದ್ ಜಹೀರ್ ಹೇಳಿದ್ದಾರೆ.