ಬಿಹಾರ: ಸಣ್ಣ ಪುಟ್ಟ ತುಣುಕುಗಳನ್ನು ನೀಡಿ ಬಿಹಾರಕ್ಕೆ ಕೊಡುಗೆ ನೀಡಿದ್ದೇವೆ ಎಂದು ಹೇಳಿದರೆ, ಅದು ನಮ್ಮ ಸಹಾಯಕ್ಕೆ ಬರುವುದಿಲ್ಲ. ಬಿಹಾರಕ್ಕೆ ನಿಜವಾಗಿಯೂ ಕೊಡುಗೆ ನೀಡಬೇಕೆಂದಿದ್ದರೆ, ವಿಶೇಷ ಸ್ಥಾನಮಾನ ಕೊಡಿ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶನಿವಾರ ಹೇಳಿದ್ದಾರೆ.
69ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಐತಿಹಾಸಿಕ ಗಾಂಧಿ ಮೈದಾನದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿರುವ ಅವರು, ಬಿಹಾರ ರಾಜ್ಯ ಖಂಡಿತವಾಗಿಯೂ ತನ್ನ ಕಠಿಣ ಶ್ರಮದ ಮೂಲಕ ಅಭಿವೃದ್ಧಿ ಕಾಣುತ್ತದೆಯೇ ಹೊರತು. ಯಾರದೋ ಆಶೀರ್ವಾದ ಅಥವಾ ಕರುಣೆಯಿಂದಲ್ಲ. ಬಿಹಾರ ರಾಜ್ಯಕ್ಕೆ ಕೊಡುಗೆ ನೀಡುತ್ತೇವೆ ಎಂದು ಹೇಳುವವರು ಮೊದಲು ಬಿಹಾರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಕೊಡಿ ಎಂದು ಹೇಳಿದ್ದಾರೆ.
ನಮಗೆ ದುಡ್ಡು ಬೇಡ, ವಿಶೇಷ ಸ್ಥಾನಮಾನ ಬೇಕು. ಬಿಹಾರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಸಿಕ್ಕರೆ ಉದ್ಯಮಿಗಳಿಗೆ ತೆರಿಗೆ ವಿನಾಯಿತಿ ದೊರೆಯುತ್ತದೆ. ಇದರಿಂದಾಗಿ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಹೆಚ್ಚಾಗುತ್ತದೆ. ರಾಜ್ಯದಲ್ಲಿ ಕಾರ್ಖಾನೆಗಳ ನಿರ್ಮಾಣ ಹೆಚ್ಚಾಗುತ್ತದೆ. ಇದರಿಂದ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳುವ ಲಕ್ಷಾಂತರ ಯುವಕರಿಗೆ ಉದ್ಯೋಗ ದೊರೆಯುತ್ತದೆ ಎಂದು ಹೇಳಿದ್ದಾರೆ.