ದೇಶ

ದಿಗಂಬರ್ ಕಾಮತ್ ಮನೆ, ಕಚೇರಿ ಮೇಲೆ ಇಡಿ, ಕ್ರೈಂ ಬ್ರಾಂಚ್ ದಾಳಿ

Lingaraj Badiger

ಪಣಜಿ: ಲೂಯಿಸ್ ಬರ್ಗರ್ ಲಂಚ ಪ್ರಕರಣ ಸಂಬಂಧ ಗೋವಾ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ಅವರ ಮನೆ, ಕಚೇರಿ ಹಾಗೂ ಸಂಬಂಧಿಕರ ನಿವಾಸಗಳ ಮೇಲೆ ಗುರುವಾರ ಜಾರಿ ನಿರ್ದೇಶನಾಲಯ ಹಾಗೂ ಕ್ರೈಂ ಬ್ರಾಂಚ್ ಅಧಿಕಾರಿಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಇಂದು ಬೆಳಗ್ಗೆ ಪಣಜಿಯಿಂದ 35 ಕಿ.ಮೀ ದೂರದಲ್ಲಿರುವ ಕಾಮತ್ ಅವರ ಮರ್ಗೋವಾ ನಿವಾಸ, ನಗರದಲ್ಲಿರುವ ಕಚೇರಿ ಹಾಗೂ ಅವರ ಸಂಬಂಧಿಕರ ನಿವಾಸಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ವಿದೇಶಿ ಕಂಪನಿಯಿಂದ ಹವಾಲ ಹಣ ಲಂಚವಾಗಿ ಪಡೆದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ಕಾಮತ್ ವಿರುದ್ಧ ಪ್ರಕರಣ ದಾಖಲಿಸಿತ್ತು.

ಬಹುಕೋಟಿಯ ಜಲಾಭಿವೃದ್ಧಿ ಯೋಜನೆ ಗುತ್ತಿಗೆ ಪಡೆಯಲು ಲೂಯಿಸ್ ಬರ್ಗರ್ ಸಂಸ್ಥೆಯಿಂದ ಲಂಚ ಸ್ವೀಕರಿಸಿದ್ದ ಆರೋಪ ಎದುರಿಸುತ್ತಿದ್ದ ದಿಗಂಬರ್ ಕಾಮತ್ ಅವರನ್ನು ಕ್ರೈಂ ಬ್ರಾಂಚ್ ಅಧಿಕಾರಿಗಳು ಈಗಾಗಲೇ ಎರಡು ಬಾರಿ ವಿಚಾರಣೆಗೊಳಪಡಿಸಿದ್ದಾರೆ. ವಿಚಾರಣೆ ಬಳಿಕ ತನಿಖಾಧಿಕಾರಿಗಳು ಕಾಮತ್ ವಿರುದ್ಧ ಸಾಕ್ಷ್ಯ ನಾಶ ಮಾಡಿರುವ ಆರೋಪದಡಿ ಹೆಚ್ಚುವರಿ ಚಾರ್ಜ್ ಶೀಟ್ ದಾಖಲಿಸಿದ್ದರು.

ಗೋವಾ ಮಾಜಿ ಮುಖ್ಯಮಂತ್ರಿ ವಿರುದ್ಧ ಐಪಿಸಿ ಸೆಕ್ಷನ್ 120  -ಬಿ ಅಡಿ ಕ್ರಿಮಿನಲ್ ಸಂಚು, ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7 ,8 ,9 , 13  ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

SCROLL FOR NEXT