ನವದೆಹಲಿ: ಸರಕು ಹಾಗೂ ಸೇವಾ ತೆರಿಗೆ (ಜಿ.ಎಸ್.ಟಿ) ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದ ಕಾಂಗ್ರೆಸ್, ಈಗ ಷರತ್ತು ಬದ್ಧ ಬೆಂಬಲ ನೀಡಲು ನಿರ್ಧರಿಸಿದೆ.
ಮುಂಗಾರು ಅಧಿವೇಶನದಲ್ಲಿ ಬಹುತೇಕ ಕಲಾಪಗಳು ಕಾಂಗ್ರೆಸ್ ನ ಪ್ರತಿಭಟನೆಯಿಂದ ವ್ಯರ್ಥವಾಗಿದ್ದು, ಪ್ರಮುಖ ಮಸೂದೆಗಳ ಅಂಗೀಕಾರಾಕ್ಕೆ ಕೇಂದ್ರ ಸರ್ಕಾರ ವಿಶೇಷ ಅಧಿವೇಶನ ನಡೆಸಲು ಉದ್ದೇಶಿಸಿದೆ. ಈ ಹಂತದಲ್ಲಿ ಜಿ.ಎಸ್.ಟಿ ಗೆ ಕಾಂಗ್ರೆಸ್ ನ ಷರತ್ತು ಬದ್ಧ ಬೆಂಬಲ ಮಹತ್ವ ಪಡೆದುಕೊಂಡಿದೆ. ಕಳೆದ ಅಧಿವೆಶನದಂತೆಯೇ ವಿಶೆಷ ಅಧಿವೇಶನವು ವ್ಯರ್ಥವಾಗಲು ಬಿಡುವುದಿಲ್ಲ. ಮಸೂದೆಗಳ ಅಂಗೀಕಾರಕ್ಕೆ ಅಗತ್ಯ ಸಿದ್ಧತೆಗಳನ್ನು ನಡೆಸಿದ ಬಳಿಕವೇ ವಿಶೆಷ ಅಧಿವೇಶನದ ವೇಳಾಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಬಿಜೆಪಿ ಹಿರಿಯರ ನಾಯಕರು ತಿಳಿಸಿದ್ದಾರೆ.
ಅಧಿವೇಶನ ಪ್ರಾರಂಭವಾಗುವುದಕ್ಕೂ ಮುನ್ನ ಜಿ.ಎಸ್.ಟಿ ಹಾಗೂ ಭೂಸ್ವಾಧೀನ ಮಸೂದೆ ಕಾಯ್ದೆಗೆ ವಿರೋಧಿಸುತ್ತಿರುವ ಕಾಂಗ್ರೆಸ್ ಪಕ್ಷದ ಷರತ್ತಿಗೆ ಒಪ್ಪಿ, ಎನ್.ಡಿ.ಎ ಸರ್ಕಾರ ಮಸೂದೆಗಳಿಗೆ ಅಂಗೀಕಾರ ಪಡೆಯಲಿದೆಯೇ ಎಂಬುದು ಕುತೂಹಲವಾಗಿದೆ. ಬಡ ಗ್ರಾಹಕರಿಗೆ ಹೊರೆಯಾಗುವುದನ್ನು ತಪ್ಪಿಸಲು ಜಿ.ಎಸ್.ಟಿ ದರವನ್ನು ಶೇ.18 ಕ್ಕೆ ಸೀಮಿತಗೊಳಿಸಬೇಕು, ಶೇ.1 ರಷ್ಟು ಹೆಚ್ಚುವರಿ ತೆರಿಗೆಯನ್ನು ತೆಗೆದುಹಾಕಬೇಕು, ಸ್ವತಂತ್ರ ವಿವಾದ ಇತ್ಯರ್ಥ ವ್ಯವಸ್ಥೆಯನ್ನು ಜಾರಿಗೊಳಿಸಬೇಕೆಂಬುದು ಜಿ.ಎಸ್.ಟಿ ಕಾಯ್ದೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನ ಬೆಡಿಕೆಗಳಾಗಿವೆ. ಮಸೂದೆ ಅಂಗೀಕಾರಕ್ಕೆ ಬೆಂಬಲ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಈ ಬೇಡಿಕೆಗಳನ್ನು ಪುನರುಚ್ಚರಿಸಿದ್ದಾರೆಯಾದರು, ಹೊಂದಾಣಿಕೆಯ ಸುಳಿವನ್ನು ನೀಡಿದ್ದಾರೆ. ಇದರೊಂದಿಗೆ ಹೊಸ ಬೇಡಿಕೆಯನ್ನು ಮುಂದಿಟ್ಟಿರುವ ಜೈರಾಮ್ ರಮೇಶ್ ಪುರಸಭೆಗಳು ಮತ್ತು ಪಂಚಾಯತ್ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ರಾಷ್ಟ್ರೀಯ ಹಿತಾಸಕ್ತಿ ಕಾರಣವನ್ನು ಮುಂದಿಟ್ಟು ಮಸೂದೆಗೆ ಷರತ್ತು ಬದ್ಧ ಬೆಂಬಲ ನೀಡಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ವಿಶ್ಲೇಷಿಸಲಾಗಿದೆ. ಅಲ್ಲದೇ ಜಿಎಸ್ ಟಿ ಕಾಯ್ದೆ ಜಾರಿಯಾಗಲು ವಿಳಂಬವಾಗುವುದಕ್ಕೆ ಸಂಸತ್ ನಲ್ಲಿ ಹಣಕಾಸಿನ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿಜೆಪಿ ನಾಯಕ ಯಶ್ವಂತ್ ಸಿನ್ಹಾ ಅವರೇ ಕಾರಣ ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ.