ದೇಶ

ಉಪಹಾರ್ ಪ್ರಕರಣ: 15 ನಿಮಿಷ ವಾದ ಮಂಡನೆಗೆ ಅವಕಾಶ ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿ ವಜಾ

Lingaraj Badiger

ನವದೆಹಲಿ: 1997 ಉಪಹಾರ್ ಚಿತ್ರಮಂದರಿದ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ ಮಂಡಿಸಲು 15 ನಿಮಿಷಗಳ ಕಾಲಾವಕಾಶ ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

'ಇದು ಸೂಕ್ತ ಅಲ್ಲ. ನಾವು ಈಗಾಗಲೇ ಪ್ರಕರಣದ ತೀರ್ಪು ನೀಡಿದ್ದೇವೆ' ಎಂದು ನ್ಯಾಯಮೂರ್ತಿ ಎ.ಆರ್.ದಾವೆ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಕಿ ಉಳಿದ ಕೆಲವು ಅಂಶಗಳನ್ನು ಮಂಡಿಸಲು ಕೇವಲ 15 ನಿಮಿಷಗಳ ಕಾಲಾವಕಾಶ ನೀಡಿ ಎಂದು ಸಿಬಿಐ ಪರ ವಕೀಲ ಹರಿಶ್ ಸಾಳ್ವೆ ಅವರು ಮನವಿ ಮಾಡಿದರು. ಆದರೆ ಇದಕ್ಕೆ ಒಪ್ಪದ ಕೋರ್ಟ್, ಅರ್ಜಿಯನ್ನು ವಜಾಗೊಳಿಸಿದೆ. ಅಲ್ಲದೆ ಮರು ಪರಿಶೀಲನಾ ಅರ್ಜಿ ಸಲ್ಲಿಸುವಂತೆ ಸಿಬಿಐಗೆ ಸೂಚಿಸಿದೆ.

ಪ್ರಕರಣದ ಆರೋಪಿಗಳಾದ ಉದ್ಯಮಿಗಳಾದ ಸುಶೀಲ್ ಅನ್ಸಾಲ್ ಮತ್ತು ಗೋಪಾಲ್ ಅನ್ಸಾಲ್ ಅವರ ಜೈಲು ಶಿಕ್ಷೆಗೆ ಅಂತ್ಯ ಸಿಕ್ಕಿದೆ. ಆದರೆ ಮೂರು ತಿಂಗಳಲ್ಲಿ ಇಬ್ಬರೂ ತಲಾ 30 ಕೋಟಿ ರುಪಾಯಿ ದಂಡ ಕಟ್ಟಬೇಕು ಎಂದು ನಿನ್ನೆ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.

ಈಗಾಗಲೇ ಜೈಲುವಾಸ ಅನುಭವಿಸಿರುವ ಅನ್ಸಾಲ್ ಸಹೋದರರಿಗೆ ಜೈಲು ಶಿಕ್ಷೆಯಿಂದ ಮುಕ್ತಗೊಳಿಸಿ, ಒಟ್ಟು 60 ಕೋಟಿ ರುಪಾಯಿ ದಂಡದ ಮೊತ್ತವನ್ನು ದೆಹಲಿ ಸರ್ಕಾರಕ್ಕೆ ಜಮೆ ಮಾಡುವಂತೆ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ಆದೇಶಿಸಿದೆ.

SCROLL FOR NEXT