ಶ್ರೀನಗರ: ಜಮ್ಮು ಕಾಶ್ಮೀರದ ಉಧಂಪುರ್ ಜಿಲ್ಲೆಯಲ್ಲಿ ಆಗಸ್ಟ್ 5ರಂದು ಬಿಎಸ್ಎಫ್ ಯೋಧರ ಮೇಲೆ ಉಗ್ರರು ದಾಳಿ ನಡೆಸಿದ್ದ ಸಂದರ್ಭದಲ್ಲಿ ಜೀವಂತವಾಗಿ ಸೆರೆಸಿಕ್ಕಿದ್ದ ಪಾಕಿಸ್ತಾನದ ಉಗ್ರ ಮೊಹಮ್ಮದ್ ನಾವೇದ್ ಯಾಕೂಬ್ ಗೆ ನೆರವು ನೀಡಿದ್ದ ಆರೋಪದಡಿ ಟ್ರಕ್ ಚಾಲಕನೊಬ್ಬನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಬಂಧಿಸಿದೆ.
ಬಂಧಿತ ನಾವೇದ್ ನ ವಿಚಾರಣೆ ವೇಳೆ ತನಗೆ ಟ್ರಕ್ ಡ್ರೈವರ್ ನೆರವು ನೀಡಿರುವ ಅಂಶ ಬೆಳಕಿಗೆ ಬಂದಿದ್ದು, ಭದ್ರತಾ ಸಂಸ್ಥೆ ಆತನ ಸೆರೆಗೆ ಬಲೆ ಬೀಸಿತ್ತು.
ಆಗಸ್ಟ್ 5ರಂದು ನಡೆದ ಘಟನೆಯಲ್ಲಿ ಯಾಕೂಬ್ ಜೊತೆಗೆ ಬಂದಿದ್ದ ಮತ್ತೊಬ್ಬ ಉಗ್ರ ಮೊಹಮ್ಮದ್ ನೋಮಾನ್ ಅಲಿಯಾಸ್ ಮೋಮಿನ್ ಬಿಎಸ್ಎಫ್ ಯೋಧರ ದಾಳಿಯಲ್ಲಿ ಸಾವನ್ನಪ್ಪಿದ್ದ. ನಾವೀದ್ ಮತ್ತು ಆತನ ಸಹಚರರಿಗೆ ಉದ್ಯಮಿಯೊಬ್ಬ 5 ಲಕ್ಷ ರು. ಕೊಟ್ಟಿದ್ದ ಎಂಬ ವಿಚಾರ ವಿಚಾರಣೆಯಲ್ಲಿ ನವೀದ್ ಬಾಯಿ ಬಿಟ್ಟಿದ್ದ.
ಈಗಾಗಲೇ ರಾಷ್ಟ್ರೀಯ ತನಿಖಾ ಸಂಸ್ಥೆ ನವೀದ್ ಗೆ ಸುಳ್ಳುಪತ್ತೆ ಪರೀಕ್ಷೆ ಮಾಡಿಸಿದ್ದು, ಹಲವಾರು ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ನವೀದ್ ವಿರುದ್ಧ ಭಾರತೀಯ ದಂಡ ಸಂಹಿತೆ ವಿರುದ್ಧ ಹಲವಾರು ಪ್ರಕರಣಗಳನ್ನು ದಾಖಲಿಸಿದ್ದಾರೆ.