ನವದೆಹಲಿ: ಕಾಶ್ಮೀರಿ ಪ್ರತ್ಯೇಕವಾದಿಗಳಿಗೆ ಮಾತುಕತೆಗೆ ಅವಕಾಶ ನೀಡಬೇಕು ಎಂದು ಪಾಕಿಸ್ತಾನ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಭಾರತ-ಪಾಕ್ ರಾಷ್ಟ್ರೀಯ ಭದ್ರತಾ ಸಲಹೆಗಾರ(ಎನ್‌ಎಸ್‌ಎ)ರ ಮಟ್ಟದ ಸಭೆಗೆ ಅನುಮಾನದ ಕಾರ್ಮೋಡ ಕವಿದಿದ್ದು, ಈ ಸಂಬಂಧ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಪತ್ರಿಕಾಗೋಷ್ಠಿ ಕರೆದಿದ್ದಾರೆ.
ಇನ್ನು ಎನ್‌ಎಸ್‌ಎ ಮಾತುಕತೆಗಾಗಿ ನಾಳೆ ದೆಹಲಿಗೆ ಬರಬೇಕಿದ್ದ ಪಾಕಿಸ್ತಾನ ರಾಷ್ಟ್ರೀಯ ಭದ್ರತಾ ಸಲಹೆಗಾರ ಸರ್ತಾಜ್ ಅಜೀಜ್ ಅವರು ಇಂದು ಮಧ್ಯಾಹ್ನ 1 ಗಂಟೆಗೆ ಪತ್ರಿಕಾಗೋಷ್ಠಿ ಕರೆದಿದ್ದಾರೆ.
ಈ ಮಧ್ಯೆ, ಸುಷ್ಮಾ ಸ್ವರಾಜ್ ಅವರು ಸಹ ಮಧ್ಯಾಹ್ನ 4 ಗಂಟೆಗೆ ಪತ್ರಿಕಾಗೋಷ್ಠಿ ಕರೆದಿದ್ದು, ಎನ್‌ಎಸ್‌ಎ ಮಾತುಕತೆ ಬಹುತೇಕ ರದ್ದಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಭಾನುವಾರ ಹಾಗೂ ಸೋಮವಾರ ಎನ್ಎಸ್ಎ ಸಭೆ ನಿಗದಿಯಾಗಿದ್ದು, ಸರ್ತಾಜ್ ಅಜೀಜ್ ಅವರು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಲ್ ಅವರಿದೊಂಗೆ ಮಾತುಕತೆ ನಡೆಸಲು ನಾಳೆ ದೆಹಲಿಗೆ ಆಗಮಿಸಬೇಕಿದೆ.
ಮಾತುಕತೆಯಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪವಾಗಕೂಡದು ಮತ್ತು ಕೇವಲ ಉಗ್ರವಾದದ ಚರ್ಚೆ ಆಗಬೇಕು. ಪ್ರತ್ಯೇಕತಾವಾದಿ ಹುರಿಯತ್ ಕಾನ್ಫರೆನ್ಸ್ ನಾಯಕರ ಜತೆ ಪಾಕ್ ಮಾತುಕತೆ ನಡೆಸಬಾರದು ಎಂದು ಭಾರತ ಸ್ಪಷ್ಟವಾಗಿ ಹೇಳಿದೆ. ಅಲ್ಲದೆ, ಚೆಂಡು ಪಾಕಿಸ್ತಾನದ ಅಂಗಳದಲ್ಲಿದ್ದು, ಮಾತುಕತೆ ಬಗ್ಗೆ ಆ ದೇಶವೇ ನಿರ್ಧರಿಸಬೇಕು ಎಂದಿದೆ. ಹೀಗಾಗಿ ಮಾತುಕತೆ ನಡೆಯುವುದು ಅನುಮಾನ.