ಆಗ್ರಾ: ವಿಶ್ವಪ್ರಸಿದ್ಧ ತಾಜ್‍ಮಹಲ್‍ನ ಪ್ರವೇಶ ದ್ವಾರದಲ್ಲಿ ಅಳವಡಿಸಲಾಗಿದ್ದ ಬ್ರಿಟಿಷರ ಕಾಲದ 60 ಕೆ.ಜಿ. ತೂಕದ ತಾಮ್ರದ ತೂಗುದೀಪಗಳ ಗೊಂಚಲು ಬುಧವಾರ ಕುಸಿದು ಬಿದ್ದಿದೆ.
ಈ ಬೆಳವಣಿಗೆ ಬಗ್ಗೆ ತನಿಖೆ ನಡೆಸುವಂತೆ ಭಾರತೀಯ ಪುರಾತತ್ವ ಇಲಾಖೆ (ಎಎಸ್‍ಐ) ಆದೇಶ ನೀಡಿದೆ. ಆರು ಅಡಿ ಎತ್ತರ ನಾಲ್ಕು ಅಡಿ ಉದ್ದದ ದೀಪಗಳ ಗೊಂಚಲನ್ನು ಲಾರ್ಡ್ ಕರ್ಜನ್ ಉಡುಗೊರೆಯಾಗಿ ನೀಡಿದ್ದ. ಇದನ್ನು 1905ರಲ್ಲಿ ರಾಯಲ್ ಗೇಟ್ ನಲ್ಲಿ ಅಳವಡಿಸಲಾಗಿತ್ತು. ಇದು ತಾಜ್ ಮಹಲ್‍ನ ಮೆರುಗನ್ನು ಇನ್ನಷ್ಟು ಹೆಚ್ಚಿಸಿತ್ತು. ದೀಪ ಕುಸಿದು ಬೀಳಲು ನಿಜವಾದ ಕಾರಣ ಇನ್ನೂ ಬಹಿರಂಗವಾಗಿಲ್ಲ. ಈ ಬೆಳವಣಿಗೆ ಬಗ್ಗೆ ಯಾರೂ ಅಧಿಕೃತ ಹೇಳಿಕೆ ನೀಡಿಲ್ಲ.
ಮತ್ತೊಮ್ಮೆ ದೀಪಗಳ ಗೊಂಚಲನ್ನು ಅಳವಡಿಸುವ ಬಗ್ಗೆ ತಾಜ್‍ಮಹಲ್‍ನ ಗೋಡೆಯ ಇತ್ತೀಚಿನ ಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿ ನಿರ್ಧರಿಸಲಾಗುತ್ತದೆ ಎಂದು ಎಎಸ್‍ಐನ ಆಗ್ರಾ ವಿಭಾಗದ ಮುಖ್ಯಸ್ಥ ಭುವನ್ ವಿಕ್ರಮ್ ಸಿಂಗ್ ತಿಳಿಸಿದ್ದಾರೆ.