ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಹಣಕ್ಕಾಗಿ ಅಪಹರಣ ಮತ್ತು ಕೊಲೆ ಪ್ರಕರಣ ಸಂಬಂಧ ಗಲ್ಲು ಶಿಕ್ಷೆ ವಿಧಿಸಿರುವುದರಲ್ಲಿ ಅಂಥ ಉತ್ಪ್ರೇಕ್ಷೆಯೇನಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಇಂಥ ಪ್ರಕರಣಗಳನ್ನು ಕಡಿಮೆ ಮಾಡುವ ಸಲುವಾಗಿ ಗಲ್ಲುಶಿಕ್ಷೆ ವಿಧಿಸಬಹುದು ಎಂದು ಹೇಳಿದೆ. ಹಣಕ್ಕಾಗಿ ಅಪಹರಣ ಮಾಡುವವರನ್ನು ಸಾಮಾನ್ಯ ಅಪರಾಧಿಗಳು ಎಂದು ಹೇಳಲಾಗುವುದಿಲ್ಲ.
ಅಲ್ಲದೆ ಉಗ್ರಗಾಮಿಗಳು ಇಂಥ ಕೆಲಸ ಮಾಡಿದಾಗಲೂ ಅಂಥದ್ದೇ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.
ಹೀಗಾಗಿ ಪ್ರಕರಣವೊಂದರಲ್ಲಿ ಕೆಳಹಂತದ ನ್ಯಾಯಾಲಯ ವಿಧಿಸಿದ್ದ ಗಲ್ಲುಶಿಕ್ಷೆಯನ್ನು ಎತ್ತಿಹಿಡಿದಿದೆ.
ಇದೇ ಸಂದರ್ಭದಲ್ಲಿ ಯಾವ ಪ್ರಕರಣಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕು, ಎಂಥ ಶಿಕ್ಷೆಗಳಿಗೆ ವಿಧಿಸಬಾರದು ಎಂಬ ಬಗ್ಗೆ ನ್ಯಾಯಪೀಠ ಚರ್ಚೆ ನಡೆಸಿದೆ. ಕಾನೂನು ಆಯೋಗ ಗಲ್ಲುಶಿಕ್ಷೆ ಕುರಿತು ತನ್ನ ವರದಿ ನೀಡಿದ ಮೇಲೆ ಈ ನಿರ್ಧಾರಗಳಿಗೆ ಬರಬಹುದು ಎಂದು ಹೇಳಿದೆ.