ನವದೆಹಲಿ: ಈರುಳ್ಳಿ ದರ ಹೆಚ್ಚುತ್ತಿದೆಯೇ? ಚಿಂತೆ ಮಾಡ್ಬೇಡಿ, ಕೇಂದ್ರ ಸರ್ಕಾರ ಈರುಳ್ಳಿಯನ್ನು ಪೇಸ್ಟ್ ಮತ್ತು ಪೌಡರ್ ರೂಪದಲ್ಲಿ ಕೊಡೋದಿಕ್ಕೆ ಚಿಂತನೆ ನಡೆಸ್ತಿದೆ!
ಹೇಗೆ, ಎತ್ತ ಎಂಬ ಚಿಂತೆ ಬೇಡ, ಹೀಗಂತ ಕೇಂದ್ರ ಆಹಾರ ಸಂಸ್ಕರಣಾ ಸಚಿವೆ ಹರ್‍ಸಿಮ್ರತ್ ಸಿಂಗ್ ಬಾದಲ್ ಹೇಳಿದ್ದಾರೆ. ಅವರಿಗೆ ಇಂಥದ್ದೊಂದು ಸೂಪರ್ ಐಡಿಯಾ ಹೊಳೆದಿದೆ. ಇವರ ಪ್ರಕಾರ, ಈರುಳ್ಳಿಗೆ ಕಡಿಮೆ ಬೆಲೆ ಇರುವಾಗ ಅದನ್ನು ಪೇಸ್ಟ್ ಮತ್ತು ಪೌಡರ್ ರೂಪದಲ್ಲಿ ಮಾಡಿಟ್ಟುಕೊಳ್ಳಬೇಕು, ಬೆಲೆ ಹೆಚ್ಚಾದಾಗ ಇದನ್ನು ಬಳಸಬೇಕು ಎಂದು ಸಲಹೆ ನೀಡಿದ್ದಾರೆ. ಮಳೆಗಾಲದಲ್ಲಿ ಈರುಳ್ಳಿ ಬೆಲೆ ಹೆಚ್ಚಾಗುತ್ತದೆ. ಹೀಗಾಗಿ ಪರ್ಯಾಯ ಚಿಂತನೆ ಮಾಡಿ, ಅದನ್ನು ಪೇಸ್ಟ್ ಮತ್ತು ಪೌಡರ್ ಮಾಡಿಟ್ಟುಕೊಳ್ಳಬಹುದು ಎಂದು ಹೇಳಿದ್ದಾರೆ.
ಇಂಥ ಕೆಲಸಗಳಿಗಾಗಿ ತಮ್ಮ ಸಚಿವಾಲಯ ಪುಟ್ಟ ಆಹಾರ ಪಾರ್ಕ್ ಬಗ್ಗೆ ಚಿಂತನೆ ನಡೆಸುತ್ತಿದೆ. ಇದರಲ್ಲಿ ಈರುಳ್ಳಿ ಉತ್ಪಾದಿಸಬಹುದು. ಒಂದು ಕಂಪನಿಗೆ 50 ಎಕರೆಗಿಂತಲೂ ಕಡಿಮೆ ಭೂಮಿ ಸಾಕು. ಜತೆಗೆ ಸರ್ಕಾರ ರು.1 ಕೋಟಿ ಸಬ್ಸಿಡಿಯನ್ನೂ ನೀಡುತ್ತದೆ ಎಂದಿದ್ದಾರೆ.
700 ಕೆಜಿ ಈರುಳ್ಳಿ ಕದ್ದರು
ಕಳ್ಳರು ಮುಂಬೈನ ಹೊರವಲಯದ ದಾಸ್ತಾನು ಅಂಗಡಿಯೊಂದರಿಂದ ಸುಮಾರು 700 ಕೆಜಿ ಈರುಳ್ಳಿ ಕದ್ದಿದ್ದಾರೆ. ಇದು ಶುಕ್ರವಾರ ರಾತ್ರಿ ಅಥವಾ ಶನಿವಾರ ಬೆಳಗ್ಗೆ ನಡೆದಿದೆ ಎಂದು ಹೇಳಲಾಗಿದೆ. ಈ ಈರುಳ್ಳಿ ಬೆಲೆ ಸುಮಾರು ರು.50 ಸಾವಿರ ಇರಬೇಕು ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ.