ನವದೆಹಲಿ: ಪಟೇಲ್ ಸಮುದಾಯಕ್ಕೆ ಮೀಸಲಾತಿ ಕೋರಿ ಗುಜರಾತ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಚರ್ಚೆಯ ಮೂಲಕ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಟಿವಿ ಮೂಲಕ ಶಾಂತಿ ಕಾಪಾಡುವಂತೆ ಮನವಿ ಮಾಡಿರುವ ಪ್ರಧಾನಿ, 'ಹಿಂಸಾಚಾರದಲ್ಲಿ ತೊಡಗಬೇಡಿ ಎಂದು ನಾನು ನನ್ನ ಎಲ್ಲಾ ಸಹೋದರ ಸಹೋದರಿಯರಲ್ಲಿ ಮನವಿ ಮಾಡಿಕೊಳ್ಳುತ್ತನೆ. ಶಾಂತಿ ಮಂತ್ರ ಮಾತ್ರ ಹೇಳಿ. ಸರ್ಕಾರ ಎಲ್ಲರ ಕಲ್ಯಾಣಕ್ಕೆ ಬದ್ಧವಾಗಿದೆ ಮತ್ತು ಚರ್ಚೆಯ ಮೂಲಕ ಶಾಂತಿಯೂತವಾಗಿ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾಗುವುದು' ಎಂದು ಹೇಳಿದ್ದಾರೆ.
ತವರು ರಾಜ್ಯದಲ್ಲಿನ ಪಟೇಲ್ ಸಮುದಾಯದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಪ್ರಧಾನಿ ಈ ಹೇಳಿಕೆ ನೀಡಿದ್ದು, 'ಗುಜರಾತ್ ಮಹಾತ್ಮ ಗಾಂಧಿ ಹಾಗೂ ಸರ್ದಾರ್ ಪಟೇಲ್ ಅವರು ಜನಿಸಿದ ನಾಡು. ಹಿಂಸಾಚಾರ ಯಾರಿಗೂ ಒಳ್ಳೆಯದಲ್ಲ. ಪ್ರತಿಯೊಬ್ಬರು ಗುಜರಾತ್ ಅಭಿವೃದ್ಧಿಗೆ ಶ್ರಮಿಸಬೇಕು' ಎಂದು ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.
'ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ನಾನು ಮತ್ತೊಮ್ಮೆ ಗುಜರಾತ್ ಜನತೆಯಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಹಿಂಸೆಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬರು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸಬೇಕು' ಎಂದು ಮೋದಿ ಮನವಿ ಮಾಡಿದ್ದಾರೆ.