ನವದೆಹಲಿ: ಕೆಲ ದಿನಗಳಿಂದ ತಣ್ಣಗಾಗಿದ್ದ ಆಪ್ ಸರ್ಕಾರ ಮತ್ತು ದೆಹಲಿ ಲೆಫ್ಟಿನೆಂಟ್ ಗವರ್ನರ್ ತಿಕ್ಕಾಟ ಮತ್ತೆ ಆರಂಭವಾಗಿದೆ. 2002 ರಲ್ಲಿ ನಡೆದಿರುವ ಹಗರಣಗಳ ಬಗ್ಗೆ ನಡೆಸುತ್ತಿರುವ ತನಿಖೆ ಕಾನೂನು ಬಾಹಿರ ಹಾಗೂ ಅಸಂವಿಧಾನಿಕ ಎಂದು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಆಪ್ ಸರ್ಕಾರಕ್ಕೆ ತಿಳಿಸಿದ್ದಾರೆ.
ಈ ಸಂಬಂಧ ಅರವಿಂದ್ ಕೇಜ್ರಿವಾಲ್ ಗೆ ಪತ್ರ ಬರೆದಿರುವ ನಜೀಬ್ ಜಂಗ್, 2002 ರಲ್ಲಿ ನಡೆದಿರುವ ಸಿಎನ್ ಜಿ ಫಿಟ್ ನೆಸ್ ಹಗರಣದ ಬಗ್ಗೆ ಕೈಗೊಂಡಿರುವ ತನಿಖೆ ಕಾನೂನು ಬದ್ದವಾಗಿ ಅಮಾನ್ಯವಾಗಿದೆ. ಕೇಂದ್ರ ಗೃಹ ಸಚಿವಾಲಯ ತನಿಖೆ ರದ್ದುಗೊಳಿಸಲು ಸೂಚಿಸಿದೆ ಎಂದು ತಿಳಿಸಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತನಿಖೆ ಕಾನೂನು ಬಾಹಿರ ಎಂದು ಹೇಳುವವರು ಕೋರ್ಟ್ ನಲ್ಲಿ ಪ್ರಶ್ನಿಸಲಿ ಎಂದು ಸವಾಲೆಸದಿದ್ದಾರೆ. ಗೃಹ ಸಚಿವಾಲಯಕ್ಕೆ ತನಿಖೆ ರದ್ದುಗೊಳಿಸುವ ಅಧಿಕಾರವಿಲ್ಲ. ಅದೇನಿದ್ದರೂ ನ್ಯಾಯಾಲಯಕ್ಕೆ ಮಾತ್ರ ಇರುವುದು ಎಂದಿದ್ದಾರೆ.
ನಜೀಬ್ ಜಂಗ್ ಕೇಂದ್ರ ಸರ್ಕಾರದ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
2002 ರಲ್ಲಿ ದೆಹಲಿ ಕಾಂಗ್ರೆಸ್ ನ ಶೀಲಾ ದೀಕ್ಷಿತ್ ದೆಹಲಿ ಮುಖ್ಯಮಂತ್ರಿಯಾಗಿದ್ದರು. ಈ ವೇಳೆ ಸಾರಿಗೆ ಇಲಾಖೆಯಲ್ಲಿ ವಾಹನಗಳಿಗೆ ಫಿಟ್ನೆಸ್ ಪ್ರಮಾಣಪತ್ರ ನೀಡುವ ಸಂಬಂಧ 100 ಕೋಟಿ ರೂಪಾಯಿಯ ಅವ್ಯವಹಾರ ಪ್ರಕರಣದ ತನಿಖೆಗೆ ಕೇಜ್ರಿವಾಲ್ ಸೂಚಿಸಿದ್ದರು.