ಪಾಟ್ನಾ: ಬಿಹಾರದಲ್ಲಿ ಕಾಂಗ್ರೆಸ್, ಆರ್.ಜೆ.ಡಿ, ಜೆಡಿಯು ಶಕ್ತಿ ಪ್ರದರ್ಶನ ನಡೆದಿದೆ. ಮೂರು ಪಕ್ಷದ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿರಿಸಿಕೊಂಡು ವಾಗ್ದಾಳಿ ನಡೆಸಿದ್ದಾರೆ.
ಜೆಡಿಯು ಹಾಗೂ ಮಿತ್ರಪಕ್ಷಗಳ ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರ ಭಾಷಣವನ್ನು ಟೀಕಿಸಿರುವ ಬಿಹಾರ ಸಿಎಂ ನಿತೀಶ್ ಕುಮಾರ್, ಒಂದು ಸುಳ್ಳನ್ನು 100 ಬಾರಿ ಹೇಳಿದರೆ ಅದೇ ಸತ್ಯವಾಗುತ್ತದೆ ಎಂದು ಹಿಟ್ಲರ್ ನೊಂದಿಗಿದ್ದ ನಾಜಿ ಹೇಳಿದ್ದರು, ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಅದೇ ಸಿದ್ಧಾಂತವನ್ನು ಅನುಸರಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಒಂದು ಸುಳ್ಳನ್ನು 100 ಬಾರಿ ಹೇಳಿ ಸುಳ್ಳನ್ನೇ ಸತ್ಯವಾಗಿಸುವ ಸಿದ್ಧಾಂತದ ಮೂಲಕವೇ ಬಿಜೆಪಿ ಜನಪ್ರಿಯತೆ ಪಡೆದಿದೆ. ಮೋದಿ ಇದೇ ಮನಸ್ಥಿತಿ ಹೊಂದಿದ್ದಾರೆ. ಬಿಹಾರಕ್ಕೆ ಪ್ರಧಾನಿ ಮೋದಿ 1 .25 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ. ಆದರೆ ಈ ಪೈಕಿ 108 ಲಕ್ಷ ಕೋಟಿ ಈ ಹಿಂದೆಯೇ ಘೋಷಣೆಯಾಗಿತ್ತು, ಮೋದಿ ಸುಳ್ಳನ್ನೇ ಸತ್ಯಮಾಡುತ್ತಾರೆ ಎಂವುದಕ್ಕೆ ಇದೇ ಉತ್ತಮ ಉದಾಹರಣೆ ಎಂದು ನಿತೀಶ್ ಹೇಳಿದ್ದಾರೆ.
ಆರ್.ಜೆ.ಡಿ ಮುಖಂಡ ಲಾಲೂ ಪ್ರಸಾದ್ ಯಾದವ್, ಜೆಡಿಯು ರಾಷ್ಟ್ರಾಧ್ಯಕ್ಷ ಶರದ್ ಯಾದವ್, ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಒಂದೇ ವೇದಿಕೆ ಹಂಚಿಕೊಂಡಿದ್ದರು.