ಮುಂಬೈ: ಶೀನಾ ಬೋರಾ ಹತ್ಯೆ ಪ್ರಕರಣದ ಆರೋಪಿಗಳ ಪೊಲೀಸ್ ಕಸ್ಟಡಿಯ ಅವಧಿಯನ್ನು ಸೆ.5 ವರೆಗೆ ವಿಸ್ತರಿಸಲಾಗಿದೆ.
ಪ್ರಮುಖ ಆರೋಪಿಗಳಾದ ಇಂದ್ರಾಣಿ ಮುಖರ್ಜಿ, ಆಕೆಯ ಮಾಜಿ ಪತಿ ಸಂಜೀವ್ ಖನ್ನಾ ಹಾಗೂ ಕಾರು ಚಾಲಕ ಶ್ಯಾಮ್ ರೈ ಪೊಲೀಸ್ ಕಸ್ಟಡಿ ಆ.31 ಕ್ಕೆ ಮುಕ್ತಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಮೂವರು ಆರೋಪಿಗಳನ್ನು ಮುಂಬೈ ಕೋರ್ಟ್ ಗೆ ಹಾಜರು ಪಡಿಸಲಾಗಿತ್ತು. ಪೊಲೀಸರು ಆರೋಪಿಗಳನ್ನು ಮತ್ತಷ್ಟು ವಿಚಾರಣೆ ನಡೆಸಬೇಕಿರುವುದರಿಂದ ಕಸ್ಟಡಿ ಅವಧಿಯನ್ನು ವಿಸ್ತರಿಸಲು ಮನವಿ ಸಲ್ಲಿಸಲಾಗಿತ್ತು.
ಸಂಜೀವ್ ಖನ್ನಾ ಅವರ ಪಾಸ್ ಪೋರ್ಟ್ ನ್ನು ಮುಂಬೈ ಪೊಲೀಸರು ವಶಪಡಿಸಿಕೊಳ್ಳಬೇಕಿದ್ದು, ಕೊಲೆ ಪ್ರಕರಣದ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಬೇಕಿದೆ. ಕೋರ್ಟ್ ಗೆ ಹಾಜರುಪಡಿಸಿದ ವೇಳೆ ಇಂದ್ರಾಣಿ ಮುಖರ್ಜಿ ಅಸ್ವಸ್ಥಗೊಂಡ ಘಟನೆಯೂ ನಡೆದಿದೆ. ಶೀನಾ ಬೋರಾ ಕೊಲೆ ಪ್ರಕರಣ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು ಇಂದ್ರಾಣಿ ಮುಖರ್ಜಿ ಅವರ ಹಣಕಾಸು ವ್ಯವಹಾರಗಳ ಬಗ್ಗೆಯೂ ತನಿಖೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.