ಚೆನ್ನೈ: ಕುಂಭದ್ರೋಣ ಮಳೆಯಿಂದಾಗಿ ಜಲಪ್ರವಾಹಕ್ಕೆ ತುತ್ತಾಗಿರುವ ತಮಿಳುನಾಡಿನ ಜನತೆಗೆ ಸೂಪರ್ ಸ್ಟಾರ್ ರಜನಿಕಾಂತ್ ನೆರವು ನೀಡಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಲಕ್ಷ ರೂಪಾಯಿ ನೀಡಿದ್ದು, ರಕ್ಷಣಾ ಕಾರ್ಯಾಚರಣೆಗೆ ರಜನಿಕಾಂತ್ ಸಹಾಯ ಮಾಡಿದ್ದಾರೆ. ರಜನಿಕಾಂತ್ ನೇತೃತ್ವದ ಶ್ರೀರಾಘವೇಂದ್ರ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ಮೂಲಕ ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಲಾಗಿದೆ ಎಂದು ಅಧಿಕೃತ ಪ್ರಕಟಣೆಯೊಂದು ತಿಳಿಸಿದೆ.
ರಜನಿಕಾಂತ್ ಮಾತ್ರವಲ್ಲದೇ ಅವರ ಅಳಿಯ ನಟ ಧನುಷ್ ಸಹ 5 ಲಕ್ಷ ರೂಪಾಯಿ ರಕ್ಷಣಾ ಕಾರ್ಯಾಚರಣೆಗೆ ನೆರವು ನೀಡಿದ್ದಾರೆ. ಕಾಲಿವುಡ್ ನಟರಾದ ಸೂರ್ಯ ಹಾಗೂ ಅವರ ಸಹೋದರ ಕಾರ್ತಿ 25 ಲಕ್ಷ, ನಟ ವಿಶಾಲ್ ಕೃಷ್ಣ ರೆಡ್ಡಿ 10 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.
ನಿರಂತರ ಮಳೆಯಿಂದಾಗಿ ತಮಿಳುನಾಡಿನ ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದು, ಪ್ರವಾಹ ಸ್ಥಿತಿ ಉಂಟಾಗಿದೆ. ಕಳೆದ ಕೆಲವು ವಾರಗಳಿಂದ ಜನಜೀವನ ಅಸ್ತವ್ಯಸ್ಥಗೊಂದಿದೆ.