ಮಳೆ ನೀರಿನಿಂದಾವೃತವಾದ ಚೆನ್ನೈ
ಈಶಾನ್ಯ ಮಾನ್ಸೂನ್‌ನಿಂದ ಈ ಬಾರಿ ಹೆಚ್ಚಿನ ಮಳೆಯಾಗುತ್ತದೆ ಎಂಬ ಸುದ್ದಿ ಕೇಳಿದಾಗ ತಮಿಳ್ನಾಡು ಜನತೆ ಖುಷಿ ಪಟ್ಟಿದ್ದರು. ಹವಾಮಾನ ಇಲಾಖೆ ಹೇಳಿದಂತೆ ಮುಂಗಾರು ಬಿರುಸಾಗಿಯೇ ಬಂದಿತ್ತು. ಆದರೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡು ಕಾರ್ಮೋಡಗಳು ಚೆನ್ನೈನತ್ತ ಧಾವಿಸಿದವು. ಮುಂಗಾರು ಮುಗಿದು ಹಿಂಗಾರು ಬಂದರೂ ಎಡೆ ಬಿಡದೆ ಸುರಿದ ಕುಂಭದ್ರೋಣ ಮಳೆಯಿಂದಾಗಿ ತಮಿಳ್ನಾಡಿನ ಮೂರು ಜಿಲ್ಲೆಗಳು ಮುಳುಗಡೆಯಾದವು. ವಾರಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತಮಿಳ್ನಾಡು ರಾಜ್ಯವೇ ನೀರಿನಿಂದಾವೃತವಾಯಿತು. ಚೆನ್ನೈಗೆ ಚೆನ್ನೈಯೇ ಮಳೆ ನೀರಿನಲ್ಲಿ ಮುಳುಗಿ ಜನ ಜೀವನ ಅಸ್ತವ್ಯಸ್ತವಾಯಿತು. ಅಂದ ಹಾಗೆ ಚೆನ್ನೈನಂತ ಮೆಟ್ರೋ ನೀರಿನಲ್ಲಿ ಮುಳುಗಡೆಯಾಗಲು ಕಾರಣವೇನು?
ಚೆನ್ನೈ ನಗರ ಜಲರಾಶಿಯಿಂದಲೇ ಆವೃತವಾಗಿರುವ ಪ್ರದೇಶವಾಗಿದೆ. ನದಿಗಳು, ಕೆರೆಗಳು, ಜಲಾಶಯಗಳು, ಸಮುದ್ರ ತೀರ ಪ್ರದೇಶಗಳಿಂದ ಆವೃತ್ತವಾಗಿರುವ ನಗರ ಚೆನ್ನೈ. ಹಾಗೆ ನೋಡಿದರೆ ಚೆನ್ನೈ ನಗರಕ್ಕೆ ಬೇಕಾದಷ್ಟು ನೀರು ಸುತ್ತ ಮುತ್ತಲಿನ ಪ್ರದೇಶಗಳಿಂದಲೇ ಸಿಗುವ ಹಾಗಿದೆ. ಆದರೆ ದೂರದೃಷ್ಟಿಯಿಲ್ಲದೆ ಇಲ್ಲಿ ನಗರಾಭಿವೃದ್ಧಿ ಮಾಡಿರುವುದೇ ಈ ಅತಿವೃಷ್ಠಿಗಳಿಗೆ ಕಾರಣ. ಇಲ್ಲಿನ ವ್ಯಾಸರ್‌ಪಡಿ ಪ್ರದೇಶದಲ್ಲಿದ್ದ 16 ಜಲಾಶಯಗಳು ಇಂದು ನಾಮಾವಶೇಷವಾಗಿದೆ.
ಇತ್ತ ಬಂಗಾಳ ಕೊಲ್ಲಿಯಿಂದ ಅತೀ ಪ್ರಬಲ ಗಾಳಿಯು ಚೆನ್ನೈ ತೀರ ಪ್ರದೇಶಕ್ಕೆ ಬೀಸುತ್ತಿರುತ್ತದೆ. ವರುಷಗಳು ಉರುಳಿದಂತೆ ಪ್ರಳಯದ ತೀವ್ರತೆ ಇಲ್ಲಿ ಹೆಚ್ಚಾಗುತ್ತಾ ಹೋಗುತ್ತದೆ. 1969, 76, 85, 96, 98, 2005ನೇ ಇಸ್ವಿಯಲ್ಲಿ ನಡೆದ ಪ್ರಳಯವೇ ಇದಕ್ಕೆ ಸಾಕ್ಷಿ. ಪ್ರಕೃತಿ ಮತ್ತು ಹವಾಮಾನವನ್ನು ಕಡೆಗಣಿಸುವದರ ಜತೆಗೆ ಸರಿಯಾದ ಪ್ಲಾನಿಂಗ್ ಇಲ್ಲದೆ ನಗರಾಭಿವೃದ್ಧಿ ಮಾಡಿರುವುದು ಈ ಪ್ರಳಯಗಳಿಗೆ ಕಾರಣ.
ಚೆನ್ನೈ ನಗರ ಪ್ರದೇಶದಲ್ಲಿ ಪೊನ್ನೇರಿ ಎಂಬ ಗ್ರಾಮವಿದೆ. ಏರಿ ಎಂದರೆ ಶುದ್ಧ ಜಲಾಶಯ ಎಂದು ಅರ್ಥ. ಕಳೆದ ವಾರ ಪೊನ್ನೇರಿಯಲ್ಲಿ 37 ಸೆ.ಮೀ ಮಳೆ ಬಿದ್ದಿದೆ. ಇಷ್ಟೊಂದು ಮಳೆ ಬೀಳುತ್ತಿರುವ ಪೊನ್ನೇರಿಯಲ್ಲಿ ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ತಮಿಳ್ನಾಡು ಸರ್ಕಾರ ಯೋಚಿಸಿದೆ. ಅಂದರೆ ಚೆನ್ನಾಗಿ ಮಳೆ ಬೀಳುತ್ತಿರುವ ಪ್ರದೇಶವೊಂದರಲ್ಲಿ ಸ್ಮಾರ್ಟ್ ಸಿಟಿ ನಿರ್ಮಿಸಿದರೆ ಏನಾಗುತ್ತದೆ ಎಂಬುದನ್ನು ಅಲ್ಲಿನ ಇಂಜಿನಿಯರ್‌ಗಳು ಗಮನಿಸಬೇಕು.
ಅದೇ ವೇಳೆ ಎನ್ನೂರಿನಲ್ಲಿ ಹಲವಾರು ಜಲಮೂಲಗಳನ್ನು ನಾಶಗೊಳಿಸಿ ಅಲ್ಲಿ ಹೊಸ ಬಂದರು ಸ್ಥಾಪಿಸಲಾಗಿತ್ತು. ಕೊಯಮ್ಮೇಡ್ ಬಸ್ ನಿಲ್ದಾಣ ನಿರ್ಮಿಸಲು ಕೆರೆಯೊಂದನ್ನು ಮುಚ್ಚಲಾಗಿತ್ತು. ಅಡಯಾರ್ ನದಿಯನ್ನು ಮುಚ್ಚಿ ವಿಮಾನ ನಿಲ್ದಾಣ ಅಭಿವೃದ್ಧಿ ಪಡಿಸಲಾಗಿತ್ತು. ಜಲ ಸಮೃದ್ಧಿಯಿಂದ ಕೂಡಿದ ಪಳ್ಳಿಕ್ಕರಣದಲ್ಲಿ ಎನ್ ಐಒ ಸ್ಥಾಪಿಸಿದ ನಂತರ, ರಿಯಲ್ ಎಸ್ಟೇಟ್ ಇಲ್ಲಿ ಹೆಚ್ಚು ಬೆಳವಣಿಗೆ ಹೊಂದಿದೆ. ಕಾಲುವೆಯನ್ನು ಮುಚ್ಚಿ ಸ್ಥಾಪಿಸಿದ ಇಂಜಿನಿಯರಿಂಗ್ ಕಾಲೇಜು ಇಲ್ಲಿದೆ.
ಕೂವಂ ನದಿಯ ಒಂದು ಭಾಗವನ್ನು ಮುಚ್ಚಿ ಚೆನ್ನೈ ಬಂದರು ಮತ್ತು ಮಧುರವೋಯಲ್ ನಲ್ಲಿ ಎಲಿವೇಟೆಡ್ ಎಕ್ಸ್ ಪ್ರೆಸ್ ಹೈವೇ ನಿರ್ಮಿಸಿದ್ದಾರೆ. 120ಎಕರೆಗಳಿಷ್ಟಿದ್ದ ಮಧುರವೋಯಿಲ್ ಜಲಾಶಯವೀಗ 25 ಹೆಕ್ಟರ್ ಆಗಿ ಕುಗ್ಗಿದೆ. ಬಕಿಂಗ್ ಹಾಮ್ ಜಲಾಶಯದ ಅಗಲ 25 ಮೀಟರ್ ಇದ್ದದ್ದು 10 ಮೀಟರ್ ಆಗಿದೆ. ಇದೀಗ ಮೇಕ್ ಇನ್ ಚೆನ್ನೈ ಎಂಬ ಆಶಯದೊಂದಿಗೆ ಮುನ್ನಡೆಯಲು ತಮಿಳ್ನಾಡು ಮುಂದಾಗಿದ್ದು, ನಗರಾಭಿವೃದ್ಧಿ ಹೆಸರಲ್ಲಿ ಇನ್ನು ಅದೆಷ್ಟೋ ಜಲಾಶಯಗಳು ಮಾಯವಾಗಲಿವೆ.
ಅದ್ಯಾವುದೇ ನಗರವಾಗಿರಲಿ, ಪ್ರಕೃತ್ತಿ ಸಂಪತ್ತನ್ನು ಹಾಳುಗೆಡವುತ್ತಾ ಬಂದರೆ ಮಳೆ ನೀರಿಗೆ ಹರಿಯಲು ಜಾಗವೆಲ್ಲಿದೆ? ಚೆನ್ನೈ ನಗರ ಮುಳುಗಡೆಗೆ ಕಾರಣವೂ ಇದೇ.