ದೇಶ

ಚೆನ್ನೈ ಮಳೆ: ಆನ್‌ಲೈನ್‌ ಸಹಾಯಹಸ್ತಕ್ಕೆ ವೆಬ್ ಸೈಟ್

Rashmi Kasaragodu
ಚೆನ್ನೈ: ಮಹಾಮಳೆಗೆ ತಮಿಳ್ನಾಡು ತತ್ತರಿಸಿ ಹೋಗಿದೆ. ಮಹಾಮಳೆಯಿಂದ ಕಂಗೆಟ್ಟಿರುವ ಜನತೆಗೆ ವಿವಿಧ ಪ್ರದೇಶಗಳಿಂದ ಸಹಾಯಹಸ್ತ ನೀಡುತ್ತಿದ್ದು, ಸಾಮಾಜಿಕ ತಾಣಗಳು ಕೂಡಾ ನೆರವು ನೀಡುತ್ತಿವೆ. 
ಸತತವಾಗಿ ಸುರಿದ ಕುಂಭದ್ರೋಣ ಮಳೆಗೆ ಚೆನ್ನೈ ನಗರ ಮುಳುಗಡೆಯಾಗಿದ್ದು, ಅಲ್ಲಿನ ಜನರ ಸಹಾಯಕ್ಕಾಗಿ  Chennairains.org ಎಂಬ ತಾತ್ಕಾಲಿಕ ವೆಬ್‌ಸೈಟ್ ಒಂದನ್ನು ರಚಿಸಲಾಗಿದೆ. ಈ ವೆಬ್‌ಸೈಟ್ ಮೂಲಕ ಸಂತ್ರಸ್ತರಿಗೆ ವಸತಿ, ಆಹಾರಗಳನ್ನು ಒದಗಿಸಲಾಗುತ್ತದೆ.
ಈ ವೆಬ್‌ಸೈಟ್ ಮೂಲಕ ಸಂತ್ರಸ್ತರ ಸುರಕ್ಷಿತ ತಾಣಗಳನ್ನು  ಹುಡುಕಬಹುದಾಗಿದೆ. ಟ್ವೀಟರ್ ಮೂಲಕ ಟ್ವೀಟ್ ಮಾಡಿಯೋ ಇಲ್ಲವೇ ಫೋನ್ ಮಾಡುವ ಮೂಲಕ ಸಹಾಯವನ್ನೂ ಪಡೆಯಬಹುದಾಗಿದೆ.
ಇಷ್ಟೇ ಅಲ್ಲದೆ ಸಂತ್ರಸ್ತರಿಗೆ ಎಲ್ಲಿ ಆಹಾರ ಸಿಗಬಹುದು, ಯಾರೆಲ್ಲಾ ಆಹಾರ ಒದಗಿಸುತ್ತಿದ್ದಾರೆ, ನೆರವು ನೀಡುತ್ತಿರುವವರ ಮಾಹಿತಿಯೂ  ವೆಬ್‌ಸೈಟ್‌ನಲ್ಲಿ ಸಿಗುತ್ತದೆ.
ಒಂದು ವೇಳೆ ಯಾರಿಗಾದರೂ ವೈದ್ಯರ ಸಹಾಯ ಬೇಕಾದಲ್ಲಿ ಸರ್ಚ್ ವರ್ಡ್ (ಹುಡುಕು ಪದಗಳ) ಮೂಲಕ  ವೈದ್ಯರಿಗೆ, ದೋಣಿಗಾಗಿ ಸಹಾಯ ಕೇಳಬಹುದು. 
ಸಂತ್ರಸ್ತರಿಗೆ ನೆರವು ನೀಡಲು ಬಯಸುವವರು ಕೂಡಾ ಈ ವೆಬ್‌ಸೈಟ್ ನಲ್ಲಿ ನೋಂದಣಿ ಮಾಡಿ ಸಹಾಯ ಹಸ್ತ ಚಾಚಬಹುದಾಗಿದೆ.
ಸಾವಿರಕ್ಕೂ ಹೆಚ್ಚು ಮಂದಿ ಸಾಮಾಜಿಕ ತಾಣಗಳ ಮೂಲಕ ಪ್ರವಾಹ ಪೀಡಿತ ಪ್ರದೇಶಗಳ ಜನರಿಗೆ ಸಹಾಯ ಮಾಡುತ್ತಿದ್ದು, Chennairains.org ತಾಣದ ಮೂಲಕವೂ ಜನರಿಗೆ ನೆರವಾಗಬಹುದು.
SCROLL FOR NEXT