ಪಾಟ್ನಾ: ಬಿಹಾರದ ಆಡಳತಿ ಪಕ್ಷ ಜನತಾ ದಳ ಸಂಯುಕ್ತ ತನ್ನ ಪಕ್ಷದ ಚಿಹ್ನೆ 'ಬಾಣ'ದಿಂದ, ಮೊದಲಿನ ಜನತಾದಳ ಪಕ್ಷ 'ಚಕ್ರ'ಕ್ಕೆ ಬದಲಾಯಿಸಿಕೊಳ್ಳಲು ಉತ್ಸುಕವಾಗಿದ್ದು ಇದಕ್ಕಾಗಿ ಚುನಾವಣಾ ಆಯೋಗಕ್ಕೆ ಮನವಿ ಮಾಡಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗುರುವಾರ ಹೇಳಿದ್ದಾರೆ.
"ಪಕ್ಷದ ಚಿಹ್ನೆ ಬದಲಾಯಿಸಲು ಜೆಡಿ-ಯು ಚುನಾವಣಾ ಆಯೋಗದ ಮೊರೆ ಹೋಗಲಿದೆ. ಈ ವಿಷಯದಲ್ಲಿ ಪಕ್ಷದ ಒಮ್ಮತದ ನಿರ್ಧಾರ ಇದು" ಎಂದು ಜೆಡಿಯು ಮುಖಂಡ ಹೇಳಿದ್ದಾರೆ.
ತಮ್ಮ ಚಿಹ್ನೆ 'ಬಾಣ', ಇತರ ಪಕ್ಷದ ಚಿಹ್ನೆಗೆ ಹೋಲುತ್ತಿದ್ದು ಇದರಿಂದ ಮತದಾರರಿಗೆ ಗೊಂದಲವಾಗಿದೆ ಎಂದು ಕೂಡ ಅವರು ಹೇಳಿದ್ದಾರೆ.
"ಇಂತಹ ಒಂದೇ ರೀತಿಯ ಚಿಹ್ನೆಗಳ ಗೊಂದಲದಿಂದಾಗಿ ಜೆಡಿಯು ವಿಧಾನಸಭಾ ಚುನಾವಣೆಗಳಲ್ಲಿ ಕೆಲವು ಕ್ಷೇತ್ರಗಳನ್ನು ಕಳೆದುಕೊಳ್ಳಬೇಕಾಯಿತು" ಎಂದು ಅವರು ಹೇಳಿದ್ದಾರೆ.
"ಜೆಡಿಯು ಈ ನಿಟ್ಟಿನಲ್ಲಿ ಮಾಜಿ ಪ್ರಧಾನಿ ಮತ್ತು ಜನತಾ ದಳ ಜಾತ್ಯಾತೀತ ಪಕ್ಷದ ಅಧ್ಯಕ್ಷ ಎಚ್ ಡಿ ದೇವೇಗೌಡ ಅವರೊಂದಿಗೆ ಮಾತುಕತೆ ನಡೆಸಲಿದೆ" ಎಂದು ಅವರು ತಿಳಿಸಿದ್ದಾರೆ.
ಜನತಾದಳ ಪಕ್ಷ, ಜನತಾದಳ ಸಂಯುಕ್ತ ಮತ್ತು ಜನತಾ ದಳ ಜಾತ್ಯಾತೀತ ಪಕ್ಷಗಳಾಗಿ ಹೋಳಾಗುವುದಕ್ಕೂ ಮೊದಲು 'ಚಕ್ರ'ದ ಚಿಹ್ನೆ ಹೊಂದಿತ್ತು.