ಗುರಗಾಂವ್: ಗೋಮಾಂಸ ಸಾಗಣೆ ಮಾಡಲಾಗುತ್ತಿದ್ದ ಆರೋಪದಡಿ ಗೋರಕ್ಷಕರು ಟ್ರಕ್ ವೊಂದನ್ನು ತಡೆದು ನಿಲ್ಲಿಸಿದ್ದು ಹರ್ಯಾಣದ ಪಲ್ವಾಲ್ ಜಿಲ್ಲೆಯಲ್ಲಿ ಘರ್ಷಣೆಗೆ ಕಾರಣವಾಗಿದೆ.
ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಯೂ ಸೇರಿದಂತೆ 10 ಮಂದಿ ಗಾಯಗೊಂಡಿದ್ದಾರೆ. " ಗೋರಕ್ಷಣೆ ಮಾಡುವವರು ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆದಿದೆ. ಇದು ಕೋಮು ಘರ್ಷಣೆ ಅಲ್ಲ ಎಂದು ಹರ್ಯಾಣದ ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಆರ್.ಎಸ್ ಸಂಗ್ವಾನ್ ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆಯಲು ಮಾಧ್ಯಮಗಳು ಹರ್ಯಾಣ ಎಸ್ ಪಿ ರಾಜೇಶ್ ದುಗ್ಗಲ್ ಗೆ ಕರೆ ಮಾಡಿದ್ದವಾದರೂ ಕರೆ ಸ್ವೀಕರಿಸಿಲ್ಲ. ಪೊಲೀಸ್ ಅಧಿಕಾರಿಯೊಬ್ಬರ ಮಾಹಿತಿ ಪ್ರಕಾರ ಆರು ಜನ ಪೊಲೀಸರು ಹಾಗೂ ನಾಲ್ವರು ಗ್ರಾಮಸ್ಥರು ಘರ್ಷಣೆಯಲ್ಲಿ ಗಾಯಗೊಂಡಿದ್ದಾರೆ. ಟ್ರಕ್ ನ ಸಹ ಚಾಲಕನನ್ನು ಥಳಿಸಿದರಾದರೂ ಆತ ಪರಾರಿಯಾಗಿದ್ದಾನೆ. ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಈ ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.