ಡಾ. ಎಪಿಜೆ ಅಬ್ದುಲ್ ಕಲಾಂ (ಸಂಗ್ರಹ ಚಿತ್ರ)
ತಿರುವನಂತಪುರಂ: ಮಾಜಿ ರಾಷ್ಟ್ರಪತಿ ದಿವಂಗತ ಡಾ. ಎಪಿಜೆ ಅಬ್ದುಲ್ ಕಲಾಂ ಅವರಿಗೆ ಬಿಎಸ್‌ಎನ್‌ಎಲ್ ಜಪ್ತಿ ನೋಟಿಸ್ ಕಳಿಸಿದೆ!. ರೆವೆನ್ಯೂ ರಿಕವರಿ ಸ್ಥಳಕ್ಕೆ ಆಗಮಿಸಿ ಬಿಲ್ ಪಾವತಿಸುವ ಮೂಲಕ ಜಪ್ತಿಯಾಗುವುದನ್ನು ತಡೆಯಬಹುದು ಎಂದು ರಾಜಭವನಕ್ಕೆ ಬಿಎಸ್‌ಎನ್‌ಎಲ್ ಕಳಿಸಿದ ನೋಟಿಸ್ ನಲ್ಲಿ ಹೇಳಲಾಗಿದೆ. ರಾಜಭವನದ ಅನಂತಪುರಿ ಸ್ವೀಟ್ ನಲ್ಲಿ ವಾಸವಿದ್ದ ಕಲಾಂ 2724800 ಎಂಬ ಲ್ಯಾಂಡ್ ಲೈನ್ ಫೋನ್ ಬಳಸಿದ್ದು, ಇದರ ಬಿಲ್ 1029 ರು. ಆಗಿದೆ. ಇದನ್ನು ಪಾಪತಿಸಬೇಕು ಎಂಬು ಬಿಎಸ್‌ಎನ್‌ಎಲ್ ನೋಟಿಸ್ ಕಳುಹಿಸಿದೆ.
ಹಲವಾರು ಬಾರಿ ನೋಟಿಸ್ ಕಳುಹಿಸಿದರೂ ಬಿಲ್ ಪಾವತಿಸದೇ ಇರುವ ಕಾರಣ ರೆವೆನ್ಯೂ ರಿಕವರಿ ಇಲಾಖೆಯ 65ನೇ ಸೆಕ್ಷನ್ ಪ್ರಕಾರ ತಮ್ಮ ಚರಾಸ್ತಿ, ಭೂಸ್ವತ್ತು ಜಪ್ತಿ ಮಾಡಲು ಆರ್ ಆರ್ ತಹಶೀಲ್ದಾರರನ್ನು ನಿಯೋಜಿಸಲಾಗಿದೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ. ಈ ತಿಂಗಳು ನಡೆಯಲಿರುವ ರೆವೆನ್ಯೂ ರಿಕವರಿ ಮೇಳದಲ್ಲಿ ಭಾಗವಹಿಸಿ ಬಿಲ್ ಪಾವತಿಸಿದರೆ ಜಪ್ತಿ ಪ್ರಕ್ರಿಯೆಯಿಂದ ಮುಕ್ತವಾಗಬಹುದು ಎಂದು ಅಕೌಂಟ್ಸ್ ಆಫೀಸರ್ ಸಹಿ ಮಾಡಿರುವ ನೋಟಿಸ್ ನಲ್ಲಿ ಹೇಳಲಾಗಿದೆ.
ಆದಾಗ್ಯೂ, ಕಲಾಂ ಬಿಲ್ ಪಾವತಿಸುವುದಕ್ಕೆ ಎಷ್ಟು ದಿನ ವಿಳಂಬವಾಗಿದೆ ಎಂಬುದನ್ನು ನೋಟಿಸ್ ನಲ್ಲಿ ಉಲ್ಲೇಖಿಸಿಲ್ಲ. ರಾಷ್ಟ್ರಪತಿಯಾಗಿದ್ದಾಗಲೂ ಅದರ ನಂತರವೂ ಕೇರಳಕ್ಕೆ ಬಂದಾಗ ಕಲಾಂ ಅನಂತಪುರಿ ಸ್ವೀಟ್ ನಲ್ಲಿ ತಂಗುತ್ತಿದ್ದರು. ಏತನ್ಮಧ್ಯೆ, ರಾಷ್ಟ್ರಪತಿಯವರ ಅಧಿಕಾರಾವಧಿ ಮುಗಿದ ನಂತರ ಉಪಯೋಗಿಸಿದ ಪ್ರತ್ಯೇಕ ಫೋನ್ ನಂಬರ್‌ನ ಬಿಲ್‌ನ್ನು ಕಲಾಂ ಪಾವತಿಸಿಲ್ಲ ಎಂದು ಇಲ್ಲಿ ಹೇಳಲಾಗಿದೆ.