ಮುಲಾಯಂ ಸಿಂಗ್ ಯಾದವ್-ಅಖಿಲೇಶ್ ಯಾದವ್
ನವದೆಹಲಿ: ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಿ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಉಪ ಪ್ರಧಾನಿ ಎಂದು ಬಿಂಬಿಸಲು ಸಿದ್ಧವಿದ್ದರೆ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಜತೆ ಮೈತ್ರಿ ಮಾಡಿಕೊಳ್ಳಲು ನಾವುಸಿದ್ದ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ತಿಳಿಸಿದ್ದಾರೆ.
`ಹಿಂದೂಸ್ಥಾನ್ ಟೈಮ್ಸ್- ಲೀಡರ್ಸ್ ಸಮಿಟ್'ನಲ್ಲಿ ``ರಾಹುಲ್ ಗಾಂಧಿ ನನ್ನ ಒಳ್ಳೆ ಸ್ನೇಹಿತ. ನಮ್ಮ ಷರತ್ತಿಗೆ ಕಾಂಗ್ರೆಸ್ ಒಪ್ಪಿದರೆ ಈ ಕ್ಷಣದಲ್ಲೇ ನಾನೂ ಮೈತ್ರಿಗೆ ಸಮ್ಮತಿಸುವೆ. ಆದರೆ, ಬಿಎಸ್‍ಪಿ ಜತೆ ಯಾವ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳುವುದಿಲ್ಲ,'' ಎಂದರು.
ಉಪ್ರ ವಿಧಾನಸಭೆ ಚುನಾವಣೆಯಲ್ಲೂ ಮಹಾಮೈತ್ರಿ ಏರ್ಪಡಲಿದೆಯೇ ಎಂದು ಪ್ರಶ್ನಿಸಿದಾಗ, ``ಮೈತ್ರಿ ಬಗ್ಗೆ ಮಾತನಾಡಲು ಇದು ಸೂಕ್ತ ಸಮಯವಲ್ಲ'' ಎಂದರು. ದಾದ್ರಿ ವಿಷಯ ಪ್ರಸ್ತಾಪವಾದಾಗ, ``ಪ್ರತಿಯೊಬ್ಬರಿಗೂ ಅವರಿಷ್ಟದ ಆಹಾರ ಸೇವಿಸುವ ಸ್ವಾತಂತ್ರ್ಯವಿದೆ'' ಎಂದರು.
ಅಖಿಲೇಶ್ ಮಾತನಾಡುವಾಗ, ಪ್ರೇಕ್ಷಕರಾಗಿದ್ದ ರಾಹುಲ್ ಗಾಂಧಿ ನಗುನಗುತ್ತಲೇ ಆಲಿಸಿದರು. ಇದೇ ಶೃಂಗಕ್ಕೆ ಕಾಂಗ್ರೆಸ್‍ನ ಮತ್ತೊಬ್ಬ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ, ಸಹೋದರಿ ಪ್ರಿಯಾಂಕಾ ವಾದ್ರಾ ಪತಿ ರಾಬರ್ಟ್ ವಾದ್ರಾ ಜತೆಗೆ ಪ್ರೇಕ್ಷಕರ ಸಾಲಿನಲ್ಲೇ ಆಸೀನರಾಗಿದ್ದರು.
ಕಾರ್ಯಕ್ರಮದ ಬಳಿಕ ಅಖಿಲೇಶ್ ಅವರ ಹೇಳಿಕೆಗೆ ಸಂಬಂಧ ರಾಹುಲ್‍ರನ್ನು ಪ್ರಶ್ನಿಸಲಾಯಿತಾದರೂ, ಅದಕ್ಕೆ ಅವರು ಯಾವುದೇ ಉತ್ತರ ನೀಡಲಿಲ್ಲ. ಅಖಿಲೇಶ್ ಯಾದವ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಪ್ರಧಾನಿ ಹುದ್ದೆ ಇನ್ನೂ 15 ರಿಂದ 20 ವರ್ಷ ಖಾಲಿ ಇಲ್ಲ ಎಂದು ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics