ನವದೆಹಲಿ: ಜಿಎಸ್ ಟಿ ಮಸೂದೆ ಜಾರಿಯಾಗುವುದು ತುರ್ತು ಅಗತ್ಯವಾಗಿರುವುದರಿಂದ ಮಸೂದೆ ಅಂಗೀಕಾರವನ್ನು ಕಾಂಗ್ರೆಸ್ ಬೆಂಬಲಿಸಬೇಕು ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ತುರ್ತಾಗಿ ಜಿಎಸ್ ಟಿ ಮಸೂದೆ ಜಾರಿಯಾಗಬೇಕಿದೆ. ಪಕ್ಷದೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಜಿಎಸ್ ಟಿ ಮಸೂದೆಗೆ ಬೆಂಬಲ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು, ಅಂತೆಯೇ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರಕ್ಕೆ ಬೆಂಬಲ ನಿಡಬೇಕಿದೆ ಎಂದು ವೆಂಕಯ್ಯ ನಾಯ್ಡು ಒತ್ತಾಯಿಸಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ಮುಂದಿಟ್ಟುಕೊಂಡು ಸಂಸತ್ ಕಲಾಪಕ್ಕೆ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್ ಕ್ರಮವನ್ನು ಪ್ರಶ್ನಿಸಿರುವ ವೆಂಕಯ್ಯ ನಾಯ್ಡು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ವಿಷಯವನ್ನು ಸಂಸತ್ ನಲ್ಲೇಕೆ ಪ್ರಸ್ತಾಪಿಸುತ್ತಿದೆ ಎಂದು ಕೇಳಿದ್ದಾರೆ.
ಸಂಸತ್ ನ ಸುಗಮ ಕಲಾಪ ನಡೆಯುವುದಕ್ಕೆ, ಬಾಕಿ ಉಳಿದಿರುವ ಮಸೂದೆಗಳಿಗೆ ಕಾಂಗ್ರೆಸ್ ಸಹಕರಿಸಲಿದೆ ಎಂದು ವೆಂಕಯ್ಯ ನಾಯ್ಡು ವಿಶ್ವಾಸ ವ್ಯಕ್ತಪಡಿಸಿದ್ದಾರೆ.