ಗುವಾಹಟಿ: ಬಿಹಾರ ವಿಧಾನಸಭೆ ಚುನಾವಣೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದ ಬಗ್ಗೆ ಮಾತನಾಡುವುದನ್ನೇ ಬಿಟ್ಟುಬಿಟ್ಟರು. ಇನ್ನು ಅವರು ಅಸ್ಸಾಂ ಹೆಸರು ಎತ್ತದಂತೆ ಮಾಡುವದೇ ನಮ್ಮ ಗುರಿ'' ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
2 ದಿನಗಳ ಅಸ್ಸಾಂ ಭೇಟಿಯಲ್ಲಿರುವ ರಾಹುಲ್ ಶುಕ್ರವಾರ ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪ್ರಧಾನಿ ವಿರುದ್ಧ ಹರಿಹಾಯ್ದ ಅವರು, ``ಪ್ರತಿ ದಿನ 10 ಆಶ್ವಾಸನೆಗಳನ್ನು ನೀಡುವುದು ಮೋದಿಯವರಿಗೆ ಅಭ್ಯಾಸವಾಗಿ ಬಿಟ್ಟಿದೆ. ಬಿಹಾರದಲ್ಲಿ ಸೋಲುಂಡ ನಂತರ ಬಿಹಾರ ಎಂಬ ಪದವೇ ಬಾಯಿಯಿಂದ ಬರುತ್ತಿಲ್ಲ. ಇನ್ನು ಅಸ್ಸಾಂ ಎಂಬ ಪದವೂ ಅವರ ಬಾಯಿಯಿಂದ ಬರದಂತೆ ಮಾಡುವುದು ನಮ್ಮ ಜವಾಬ್ದಾರಿ'' ಎಂದಿದ್ದಾರೆ ರಾಹುಲ್.
ಪ್ರಧಾನಿಯಲ್ಲಿ ಬದಲಾವಣೆ ನೋಡುತ್ತಿರಿ: ಸತತ ನಾಲ್ಕನೇ ಬಾರಿಯೂ ಅಸ್ಸಾಂ ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ರಾಹುಲ್, ಅಸ್ಸಾಂ ಮತ್ತು ಕೇರಳದಲ್ಲಿ ಕಾಂಗ್ರೆಸ್ ಅತ್ಯಂತ ಬಲಿಷ್ಠವಾಗಿದೆ. ನಾವು ಮೋದಿಯವರಿಗೆ ಸೋಲಿನ ರುಚಿ ನೀಡುತ್ತೇವೆ. ಬಿಹಾರ ಸೋಲಿನ ಬಳಿಕ ಮೋದಿಯವರಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆ ಆಗಿದೆ. ಇನ್ನೂ ಅಸ್ಸಾಂ ನಲ್ಲಿ ಸೋತ ಬಳಿಕ ಅವರ ವರ್ತನೆಯಲ್ಲಿ ಸಂಪೂರ್ಣ ಬದಲಾವಣೆ ಆಗಲಿದೆ ಎಂದೂ ಹೇಳಿದ್ದಾರೆಂದು `ದಿ ಎಕನಾ ಮಿಕ್ ಟೈಮ್ಸ್ ' ವರದಿ ಮಾಡಿದೆ.
ಬಲೂನು ಠುಸ್ಸ್: ಗುಜರಾತ್ ಮಾದರಿ ಎನ್ನುವುದೇ ಒಂದು ಬಲೂನು, ಅದನ್ನು ನಾವು ಠುಸ್ ಮಾಡುತ್ತೇವೆ. ನೀವೀಗಾಗಲೇ ಗುಜರಾತ್ನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜಪಿಯನ್ನು ಯಾರು ಸೋಲಿಸಿದರು ಎಂಬುದನ್ನು ನೋಡಿದ್ದೀರಿ. ಗುಜರಾತ್ನ ಅತಿ ದೊಡ್ಡ ಸಮುದಾಯವು ಏಕೆ ಪ್ರತಿಭಟಿ ಸುತ್ತಿದೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳ ಬೇಕು. ಪಶ್ಚಿಮಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳದಲ್ಲಿ ಬಿಜೆಪಿಯನ್ನು ಕಾಂಗ್ರೆಸ್ ಸೋಲಿಸಲಿದೆ ಎಂದೂ ನುಡಿದಿದ್ದಾರೆ ರಾಹುಲ್.