ಅಪರಾಧ ಸಾಬೀತಾಗುವ ಮೊದಲೇ ಭ್ರಷ್ಟಾಚಾರ ಆರೋಪಿಯ ಆಸ್ತಿಪಾಸ್ತಿಗಳನ್ನು ಜಪ್ತಿ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಭ್ರಷ್ಟ ಸರ್ಕಾರಿ ಅಧಿಕಾರಿಗಳ ಅಪರಾಧ ಸಾಬೀತಾಗುವ ಮುಂಚೆಯೇ ಅವರ ಮನೆಗಳು ಸೇರಿದಂತೆ ಅಕ್ರಮವಾಗಿ ಗಳಿಸಿದ ಆಸ್ತಿ-ಪಾಸ್ತಿಗಳನ್ನು ಜಪ್ತಿ ಮಾಡುವ ಅಧಿಕಾರವನ್ನು ತನಿಖಾ ಸಂಸ್ಥೆಗಳಿಗೆ ನೀಡುವಂತಹ ಕಾನೂನಿಗೆ ಬಿಹಾರ ಮತ್ತು ಒಡಿಶಾ ಅಸೆಂಬ್ಲಿಯ ಅಂಗೀಕಾರ ಸಿಕ್ಕಿದೆ.
ಸರ್ಕಾರಗಳ ಈ ಕಾನೂನಿಗೆ ಶುಕ್ರವಾರ ಬೆಂಬಲ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಈ ರೀತಿ ಭ್ರಷ್ಟರ ಆಸ್ತಿಯನ್ನು ಆಸ್ತಿ ಜಪ್ತಿ ಮಾಡುವುದು ತಪ್ಪಲ್ಲ ಎಂದು ಅಭಿಪ್ರಾಯಪಟ್ಟಿದೆ. ಜತೆಗೆ, ಆಸ್ತಿ ಜಪ್ತಿಯನ್ನು ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದ್ದ ಅಧಿಕಾರಿಗಳ ಅರ್ಜಿಗಳನ್ನು ವಜಾ ಮಾಡಿದೆ. ಈ ಬಗ್ಗೆ `ದ ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.
`ಭ್ರಷ್ಟಾಚಾರ ಎನ್ನುವುದು ಚುನಾಯಿತ ಪ್ರಜಾಸತ್ತೆ ಮತ್ತು ಸಾಂವಿಧಾನಿಕ ಆಡಳಿತದ ಮೂಲಭೂತ ತಿರುಳನ್ನೇ ತಿಂದುಹಾಕುತ್ತಿದೆ. ಭ್ರಷ್ಟಾಚಾರವು ರಾಷ್ಟ್ರೀಯ ಆರ್ಥಿಕ ಭಯೋತ್ಪಾದಕನಿದ್ದಂತೆ. ಈ ಸಾಮಾಜಿಕ ವಿಪತ್ತನ್ನು ಬೇರೆಯೇ ರೀತಿ ನಿಭಾಯಿಸಬೇಕಿದೆ. ಅದಕ್ಕಾಗಿ ಕಠಿಣ ನಿಬಂಧನೆಗಳುಳ್ಳ ವಿಶೇಷ ಕಾನೂನನ್ನು ಸರ್ಕಾರ ಜಾರಿ ಮಾಡಬೇಕು' ಎಂದು ಸುಪ್ರೀಂ ಕೋರ್ಟ್ ನ್ಯಾ. ದೀಪಕ್ ಮಿಶ್ರಾಮತ್ತು ನ್ಯಾ.ಪ್ರಪುಲ್ಲಾ ಸಿ ಪಂತ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿತು. ಜತೆಗೆ, `ಅಕ್ರಮವಾಗಿ ಆಸ್ತಿಗಳಿಸುವುದು ಪ್ರಾಮಾಣಿಕತೆಯನ್ನು ನಂಬಿ ಬದುಕುತ್ತಿರುವವರ ಭಾವನೆಗೆ ನೋವುಂಟುಮಾಡುತ್ತದೆ. ಇವರು ಎಂತಹ ನೋವುಗಳನ್ನು ಅನುಭವಿಸಿದ್ದಾರೆ ಎಂಬುದನ್ನು ಇತಿಹಾಸವೇ
ಹೇಳುತ್ತದೆ. ಹಾಗಾಗಿ ಭ್ರಷ್ಟಾಚಾರ ಯಾವುದೇ ರೀತಿಯದ್ದಾಗಿರಲಿ, ಅದನ್ನು ಸಹಿಸಲು ಸಾಧ್ಯವೇ ಇಲ್ಲ. ಭ್ರಷ್ಟಾಚಾರದಲ್ಲಿ ತೊಡಗಿರುವವರ ವಿರುದ್ಧ ಸೂಕ್ತ ಕ್ರಮ ಅಗತ್ಯ' ಎಂದೂ ಹೇಳಿತು ನ್ಯಾಯಪೀಠ.