ದೇಶ

ತೆರವು ವೇಳೆ ಮಗು ಸಾವು: ಮರಣೋತ್ತರ ಪರೀಕ್ಷಾ ವರದಿ; ರೇಲ್ವೆ ಇಲಾಖೆ ಸುಳ್ಳು ಹೇಳಿತೆ?

Lingaraj Badiger

ನವದೆಹಲಿ: ಶಾಕೂರ್ ಬಸ್ತಿ ತೆರವು ಪ್ರಕರಣ ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ. ಮಗುವಿನ ಎದೆ ಹಾಗೂ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಮಗು ಮೃತಪಟ್ಟಿದೆ ಎಂದು ಗುಡಿಸಲು ತೆರವು ಕಾರ್ಯಾಚರಣೆ ವೇಳೆ ಮೃತಪಟ್ಟ ಮಗುವಿನ ಮರಣೋತ್ತರ ಪರೀಕ್ಷಾ ವರದಿ ಹೇಳಿದೆ.

ಟಿವಿ ವರದಿಯ ಪ್ರಕಾರ, ತೆರವು ಕಾರ್ಯಾಚರಣೆ ವೇಳೆ ಕೆಲವು ಗಟ್ಟಿ ವಸ್ತುಗಳು ಸಿಡಿದುಬಂದು ಮಗುವಿಗೆ ಬಡಿದಿದ್ದರಿಂದ ಮಗು ತೀವ್ರವಾಗಿ ಗಾಯಗೊಂಡು ಮೃತಪಟ್ಟಿದೆ.

ಈ ಪ್ರಕರಣ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಹಾಗೂ ರೇಲ್ವೆ ಇಲಾಖೆ ಮಧ್ಯ ತೀವ್ರ ವಾಗ್ವಾದಕ್ಕೆ ಕಾರಣವಾಗಿದ್ದು, ಮಗು ಸಾವಿಗೆ ರೇಲ್ವೆ ಇಲಾಖೆಯ ತೆರವು ಕಾರ್ಯಾಚರಣೆಯೇ ಕಾರಣ ಎಂದು ದೆಹಲಿ ಸಿಎಂ ಆರೋಪಿಸಿದ್ದಾರೆ. ಆದರೆ ಕೇಜ್ರಿವಾಲ್ ಅವರ ಆರೋಪವನ್ನು ತಳ್ಳಿಹಾಕಿದ್ದ ರೇಲ್ವೆ ಇಲಾಖೆ, ತೆರವು ಕಾರ್ಯಾಚರಣೆಗೂ ಮುನ್ನವೇ ಮಗು ಮೃತಪಟ್ಟಿತ್ತು ಎಂದು ಹೇಳಿದೆ.

ಪಶ್ಚಿಮ ದೆಹಲಿಯ ಶಾಕೂರ್ ಬಸ್ತಿ ಎಂಬಲ್ಲಿ ಸುಮಾರು 1200 ಕೊಳೆಗೇರಿ ಗುಡಿಸಲುಗಳಿದ್ದವು. ಇವುಗಳನ್ನು ರೈಲ್ವೆ ಇಲಾಖೆಗೆ ಸೇರಿದ ಜಾಗವನ್ನು ಒತ್ತುವರಿ  ಮಾಡಿ ನಿರ್ಮಿಸಲಾಗಿದೆ ಎಂಬ ಕಾರಣ  ನೀಡಿ ಇಲಾಖೆ ತೆರವು ಕಾರ್ಯಾಚರಣೆ ನಡೆಸಿತು. ಈ ವೇಳೆ ಆರು ತಿಂಗಳ ಮಗುವೊಂದು ಮೃತಪಟ್ಟಿತ್ತು. ಈ ಘಟನೆ ರೈಲ್ವೆ ಇಲಾಖೆ ಮತ್ತು ದೆಹಲಿ ಸರ್ಕಾರದ ನಡುವೆ ಗುದ್ದಾಟಕ್ಕೆ ಕಾರಣವಾಗಿದ್ದು, ಘಟನೆಗೆ ರೈಲ್ವೆ ಇಲಾಖೆ ಕಾರಣವಲ್ಲ, ಕಾರ್ಯಾಚರಣೆಗೂ ಮುನ್ನವೇ ಮಗು ಮೃತಪಟ್ಟಿತ್ತು ಎಂದು ಸುರೇಶ್ ಪ್ರಭು ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದಾರೆ.

SCROLL FOR NEXT