ಮುಂಬೈ: ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಟಿವಿ ವಾಹಿನಿಯ ಮಾಜಿ ಸಿಇಒ ಪೀಟರ್ ಮುಖರ್ಜಿಯ ನ್ಯಾಯಾಂಗ ಬಂಧನದ ಅವಧಿಯನ್ನು ಡಿಸೆಂಬರ್ 28ರವರೆಗೆ ವಿಸ್ತರಿಸಲಾಗಿದೆ.
ಪೀಟರ್ ಮುಖರ್ಜಿಯ 14 ದಿನಗಳ ನ್ಯಾಯಾಂಗ ಬಂಧನ ಅವಧಿ ಇಂದು ಅಂತ್ಯಗೊಂಡ ಹಿನ್ನೆಲೆಯಲ್ಲಿ ಆರೋಪಿಯನ್ನು ಮುಂಬೈ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸಲಾಯಿತು.
ವಿಚಾರಣೆ ನಡೆಸಿದ ಕೋರ್ಟ್ ಪೀಟರ್ ಮುಖರ್ಜಿಯ ನ್ಯಾಯಾಂಗ ಬಂಧನವನ್ನು ಮತ್ತೆ 14 ದಿನಗಳ ಕಾಲ ವಿಸ್ತರಿಸಿದ ಆದೇಶಿಸಿದೆ.
ಇದೇ ವೇಳೆ ಆರೋಪಿ ಪರ ವಕೀಲರು ಪೀಟರ್ ಮುಖರ್ಜಿ ಹಿರಿಯ ನಾಗರಿಕರಾಗಿದ್ದು, ಅವರಿಗೆ ಹೃದಯ ಸಂಬಂಧಿ ಕಾಯಿಲೆ ಇದೆ. ಹೀಗಾಗಿ ಅವರು ಮನೆಯ ಆಹಾರ ಸೇವಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ವಿಶೇಷ ಅಭಿಯೋಜಕಿ ಕವಿತಾ ಪಾಟೀಲ್ ಅವರು, ಜೈಲು ಅಧಿಕಾರಿಗಳು ಅವರ ಅಗತ್ಯಗಳನ್ನು ಪೂರೈಸಲಿದ್ದಾರೆ ಎಂದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ನಾಳೆ ಪೀಟರ್ ಮನವಿ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.