ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 25 ರುಪಾಯಿ ಕಡೆಮೆ ಮಾಡುವಂತೆ ಹಾಗೂ ಕುಂಭದ್ರೋಣ ಮಹಾಮಳೆಗೆ ತತ್ತರಿಸಿರುವ ತಮಿಳುನಾಡಿಗೆ ಹೆಚ್ಚಿನ ಹಣಕಾಸು ನೆರವು ಸೇರಿದಂತೆ ಹಲವು ವಿಷಯಗಳು ಇಂದು ಲೋಕಸಭೆಯಲ್ಲಿ ಪ್ರಸ್ತಾಪವಾದವು.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಿಪಿಐ(ಎಂ) ಸಂಸದ ಎಂ.ಬಿ.ರಾಜೇಶ್ ಅವರು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ದಾಖಲೆ ಪ್ರಮಾಣದಲ್ಲಿ ಪ್ರತಿ ಬ್ಯಾರಲ್‌ಗೆ 35 ಡಾಲರ್‌ನಷ್ಟು ಕಡಿಮೆಯಾಗಿದೆ. ಹೀಗಾಗಿ ಕೂಡಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 25 ರುಪಾಯಿವರೆಗೆ ಕಡಿಮೆ ಮಾಡುವ ಅಗತ್ಯ ಇದೆ ಎಂದರು.
ಇನ್ನು ಮಹಾಮಳೆಯಿಂದ ನಿರಾಶ್ರಿತರಾಗಿರುವವರಿಗೆ 50 ಸಾವಿರ ಮನೆ ನಿರ್ಮಿಸಲು 5 ಸಾವಿರ ಕೋಟಿ ರುಪಾಯಿ ಆರ್ಥಿಕ ನೆರವು ನೀಡಬೇಕು ಎಂದು ಎಐಎಡಿಎಂಕೆ ಸಂಸದ ಪಿ.ನಾಗರಾಜನ್ ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯ ಯೋಗಿ ಆದಿತ್ಯನಾಥ್ ಅವರು ಮಾತನಾಡಿ, ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಉತ್ತರ ಪ್ರದೇಶದಲ್ಲಿ ಸುಮಾರು 13,000 ಇಟ್ಟಿಗೆ ಉತ್ಪಾದನಾ ಘಟಕಗಳು ಮುಚ್ಚಿದ್ದು ಈ ಬಗ್ಗೆ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಿ ಸಂತ್ರಸ್ತರಿಗೆ ನೆರವಾಗಬೇಕು ಎಂದು ಒತ್ತಾಯಿಸಿದರು.