ಪುಣೆ: ಇಸಿಸ್ ಉಗ್ರ ತತ್ವ ಸಿದ್ಧಾಂತಗಳಿಗೆ ಮಾರು ಹೋಗಿ ಭಯೋತ್ಪಾದಕ ಸಂಘಟನೆ ಸೇರಲು ಹೊರಟಿದ್ದ 16 ವರ್ಷದ ಬಾಲಕಿಯನ್ನು ಮಹಾರಾಷ್ಟ್ರ ಉಗ್ರ ನಿಗ್ರಹ ಪಡೆ ರಕ್ಷಿಸಿದೆ.
ಪುಣೆಯ ಕಾನ್ವೆಂಟ್ ಒಂದರ 11 ನೇ ತರಗತಿ ವಿದ್ಯಾರ್ಥಿನಿ ಇಸಿಸ್ ಉಗ್ರ ಸಂಘಟನೆ ಸೇರಲು ಸಿರಿಯಾಗೆ ವಿಮಾನದಲ್ಲಿ ಹೊರಟಿದ್ದಳು. ಈ ವೇಳೆ ಮಹಾರಾಷ್ಟ್ರ ಎಟಿಎಸ್ ನ ಸಮಯ ಪ್ರಜ್ಞೆಯಿಂದ ಮುಂದೆ ಉಂಟಾಗಬಹುದಾಗಿದ್ದ ಬಹು ದೊಡ್ಡ ಅನಾಹುತ ವೊಂದು ತಪ್ಪಿದಂತಾಗಿದೆ.
ಹಲವು ದಿನಗಳಿಂದ ಬಾಲಕಿ ಬಗ್ಗೆ ಎಟಿಎಸ್ ಮಾಹಿತಿ ಸಂಗ್ರಹಿಸಿತ್ತು. ಕಳೆದ ವಾರ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಹಲವು ಸ್ಫೋಟಕ ಮಾಹಿತಿಗಳನ್ನು ಬಾಲಕಿ ಬಹಿರಂಗ ಪಡಿಸಿದ್ದಾಳೆ.
ಇಸಿಸ್ ಸಂಘಟನೆಯ ನಿರ್ದೇಶನದಂತೆ ತಾನು ಎಂಥ ಕೆಲಸವನ್ನಾದರೂ ಮಾಡಲು ಸಿದ್ದವಿದ್ದೂ ಅದಕ್ಕಾಗಿಯೇ ಸಿರಿಯಾಗೆ ತೆರಳುತ್ತಿದ್ದೆ ಎಂಬ ಆಘಾತಕಾರಿ ಮಾಹಿತಿಯನ್ನು ನೀಡಿದ್ದಾಳೆ ಎಂದು ಪುಣೆ ಎಟಿಎಸ್ ಅಧಿಕಾರಿ ಭಾನು ಪ್ರತಾಪ್ ಬರ್ಗ್ ತಿಳಿಸಿದ್ದಾರೆ.
ಇಸಿಸ್ ಸಂಘಟನೆ ಕುರಿತು ಆಲ್ ಜಝೀರಾ ಚಾನಲ್ ನಲ್ಲಿ ಪ್ರಸಾರವಾಗುತ್ತಿದ್ದ ಡಾಕ್ಯುಮೆಂಟರಿಯನ್ನು ನಿರಂತರವಾಗಿ ನೋಡುತ್ತಿದ್ದ ಬಾಲಕಿ ಇಸಿಸ್ ಸಿದ್ದಾಂತಗಳೆಡೆಗೆ ಆಕರ್ಷಿತಳಾಗಿ ಉಗ್ರ ಸಂಘಟನೆ ಸೇರಲು ಹೊರಟಿದ್ದಳು ಎಂದು ಎಟಿಎಸ್ ತಿಳಿಸಿದೆ.