ನವದೆಹಲಿ: ಏರ್ ಇಂಡಿಯಾದಲ್ಲಿ 60-90 ನಿಮಿಷಗಳ ಕಾಲ ಪ್ರಯಾಣ ಬೆಳೆಸುವ ಪ್ರಯಾಣಿಕರಿಗೆ ಇನ್ನು ಮುಂದೆ ಮಾಂಸಾಹಾರಕ್ಕೆ ಬ್ರೇಕ್ ಬೀಳಲಿದ್ದು, ಬಿಸಿಯಾದ ಸಸ್ಯಾಹಾರಗಳು ಮಾತ್ರ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ.
ಈ ಕುರಿತಂತೆ ಏರ್ ಇಂಡಿಯಾ ಸಂಸ್ಥೆ ಹೊಸ ನಿಯಮವೊಂದನ್ನು ಜಾರಿ ಮಾಡಲಿದ್ದು, ಈ ನಿಯಮವು ಜನವರಿ 1ರಿಂದ ಜಾರಿಯಾಗಲಿದೆ ಎಂದು ತಿಳಿದುಬಂದಿದೆ.
ಡಿ.23ರಂದು ಆಹಾರ ಬದಲಾವಣೆ ಕುರಿತಂತೆ ನೂತನ ನಿಯಮವೊಂದನ್ನು ಏರ್ ಇಂಡಿಯಾ ಬಿಡುಗಡೆ ಮಾಡಿತ್ತು. ಈ ನಿಯಮಕ್ಕೆ ಇದೀಗ ಏರ್ ಇಂಡಿಯಾ ಜನರಲ್ ಮ್ಯಾನೇಜರ್ ಸಮ್ಮತಿ ಸೂಚಿಸಿದ್ದು, ಈ ನಿಯಮವು ಹೊಸ ವರ್ಷದಂದು ಜಾರಿಯಾಗಲಿದೆ ಎಂದು ಹೇಳಲಾಗುತ್ತಿದೆ.
ಸಮಯದ ಅಭಾವದಿಂದ ಪ್ರಯಾಣಿಕರಿಗೆ ಆಹಾರದ ಆಯ್ಕೆ ಮಾಡುವುದನ್ನು ನೀಡಲು ಸಾಧ್ಯವಾಗಿಲ್ಲ. ಇನ್ನು ಮುಂದೆ ಪ್ರಯಾಣಿಕರಿಗೆ ಬಿಸಿಯಾದ ಸಸ್ಯಾಹಾರಗಳನ್ನು ನೀಡಲಾಗುತ್ತದೆ. ಎಂದಿನಂತೆ ಆಹಾರದ ಮೆನುವಿನಲ್ಲಿ ಟೀ ಮತ್ತು ಕಾಫಿಗಳು ಸಾಮಾನ್ಯವಾಗಿಯೇ ಇರುತ್ತದೆ. ಸಮಯದ ಉಳಿತಾಯಕ್ಕಾಗಿ ಹಾಗೂ ಮಾಂಸ ಆಹಾರ ನೀಡುವ ವೇಳೆ ಆಗುವ ಸಮಸ್ಯೆಗಳನ್ನು ತಪ್ಪಿಸಲು ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.