ನವದೆಹಲಿ: ಉದ್ಯೋಗ ಹುಡುಕುವವರಿಗಿಂತ ಉದ್ಯೋಗ ಸೃಷ್ಟಿಸುವವರನ್ನು ಭಾರತ ಎದುರು ನೋಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಡಾ.ಬಿ.ಆರ್ ಅಂಬೇಡ್ಕರ್ ಅವರ 125 ನೇ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ದಲಿತ್ ಇಂಡಿಯಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಡಿಐಸಿಸಿಐ)ಯ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಮೋದಿ, ಅಂಬೇಡ್ಕರ್ ಅವರು ಸಂವಿಧಾನದ ಹಿಂದಿರುವ ಶಕ್ತಿ ಎಂದು ನಮಗೆ ತಿಳಿದಿದೆ ಆದರೆ ಅವರೊಬ್ಬ ಉತ್ತಮ ಆರ್ಥಿಕ ತಜ್ಞರಾಗಿದ್ದರು ಎಂಬುದು ಹಲವರಿಗೆ ತಿಳಿದಿಲ್ಲ ಎಂದು ಮೋದಿ ಹೇಳಿದ್ದಾರೆ.
ಕೈಗಾರಿಕರಣದಿಂದ ದಲಿತರಿಗೆ ಹೆಚ್ಚು ಲಾಭವಾಗುತ್ತದೆ ಎಂದು ಅಂಬೇಡ್ಕರ್ ಹೇಳುತ್ತಿದ್ದರು, ಇಂದು ದಲಿತರು ಉದ್ಯಮ ಕ್ಷೇತ್ರದಲ್ಲಿ ಸಾಧಿಸಿರುವ ಯಶಸ್ಸನ್ನು ನೋಡಿದ್ದರೆ ಅಂಬೇಡ್ಕರ್ ಸಂತಸ ಪಡುತ್ತಿದ್ದರು ಎಂದು ಮೋದಿ ಹೇಳಿದ್ದಾರೆ.
ಉದ್ಯಮ ಉತ್ತೇಜನೆಗಾಗಿಯೆ ಪ್ರಾರಂಭಿಸಲಾಗಿರುವ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಈವರೆಗೂ 80 ಲಕ್ಷ ಜನರು ಸಾಲ ಪಡೆದಿದ್ದಾರೆ. ಈ ಪೈಕಿ ಅತಿ ಹೆಚ್ಚು ಜನರು ದಲಿತರಾಗಿದ್ದು, ನಮ್ಮ ಸರ್ಕಾರ ದಲಿತರ ಶ್ರೇಯೋಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಲಿದೆ ಎಂದಿದ್ದಾರೆ ಮೋದಿ.