ಜಮ್ಮು: ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಅವರು ಶೀಘ್ರದಲ್ಲೇ ತಮ್ಮ ಪುತ್ರಿ ಹಾಗೂ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರಿಗೆ ಅಧಿಕಾರ ಹಸ್ತಾಂತರಿಸುವ ಸಾಧ್ಯತೆ ಇದೆ.
1999ರಲ್ಲಿ ಕಣಿವೆ ರಾಜ್ಯದಲ್ಲಿ ಪೀಪಲ್ಸ್ ಡೆಮೊಕ್ರಟಿಕ್ ಪಕ್ಷ(ಪಿಡಿಪಿ) ಸ್ಥಾಪಿಸಿದ 79 ವರ್ಷದ ಸಯೀದ್ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಡಿಸೆಂಬರ್ 24ರಿಂದು ದೆಹಲಿಯ ಏಮ್ಸ್ ನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಸಿಎಂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಡಿಸೆಂಬರ್ 29ರಂದು ಆಸ್ಪತ್ರೆಗೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು, ಸಯೀದ್ ಅವರ ಆರೋಗ್ಯ ವಿಚಾರಿಸಿದ್ದರು,
ಸಯೀದ್ ಅವರು ಆಸ್ಪತ್ರೆಗೆ ದಾಖಲಾಗುವ ಮುನ್ನವೇ ತಮ್ಮ ಪುತ್ರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಮೆಹಬೂಬಾ ಅವರು ಈ ವರದಿಗಳನ್ನು ತಳ್ಳಿ ಹಾಕಿದ್ದರು. ಇದೀಗ ರಾಜಕೀಯ ವಲಯದಲ್ಲಿ ಆ ಮಾತುಗಳು ಕೇಳಿ ಬರುತ್ತಿದ್ದು, ಶೀಘ್ರದಲ್ಲೇ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಲಿದ್ದಾರೆ ಎನ್ನಲಾಗಿದೆ.