ನವದೆಹಲಿ: ಶುಕ್ರವಾರದಿಂದ ರು.50 ಸಾವಿರಕ್ಕಿಂತ ಹೆಚ್ಚಿನ ಹೋಟೆಲ್ ಬಿಲ್ ಅಥವಾ ವಿದೇಶ ಪ್ರವಾಸ, ರು.2 ಲಕ್ಷಕ್ಕಿಂತ ಹೆಚ್ಚಿನ ಚಿನ್ನಾಭರಣ ಖರೀದಿಗೆ ಪ್ಯಾನ್ ಕಾರ್ಡ್ ಕಡ್ಡಾಯ ನಿಯಮ ಜಾರಿಗೆ ಬರಲಿದೆ.
ಕಪ್ಪುಹಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ನಿಯಮ ಜಾರಿ ಮಾಡಲಾಗಿದೆ ಎಂದು ಕೇಂದ್ರ ವಿತ್ತ ಸಚಿವಾಲಯ ತಿಳಿಸಿದೆ. ರು.10 ಲಕ್ಷಕ್ಕಿಂತ ಹೆಚ್ಚಿನ ಸ್ಥಿರ ಆಸ್ತಿ ಖರೀದಿ, ಬ್ಯಾಂಕು, ಅಂಚೆಕಚೇರಿ, ಎನ್‍ಬಿಎಫ್ ಸಿಗಳಲ್ಲಿ ರು.50 ಸಾವಿರಕ್ಕಿಂತ ಹೆಚ್ಚಿನ ಠೇವಣಿಗೂ ಪ್ಯಾನ್ ಸಂಖ್ಯೆ ಕಡ್ಡಾಯ ಮಾಡಲಾಗಿದೆ.
ಜನಧನ ಹೊರತುಪಡಿಸಿ ಇತರೆ ಎಲ್ಲ ಬ್ಯಾಂಕ್ ಖಾತೆ ತೆರೆಯಲು ಪ್ಯಾನ್ ಬೇಕೇ ಬೇಕು. ಇತ್ತೀಚೆಗಷ್ಟೇ ವಿತ್ತ ಸಚಿವ ಜೇಟ್ಲಿ ಅವರು, ರು.2 ಲಕ್ಷಕ್ಕಿಂತ ಹೆಚ್ಚಿನ ಎಲ್ಲ ನಗದು ಮತ್ತು ಕಾರ್ಡ್ ವಹಿವಾಟುಗಳಿಗೆ ಪ್ಯಾನ್ ಕಡ್ಡಾಯ ಎಂದು ಘೋಷಿಸಿದ್ದರು.