ನವದೆಹಲಿ: 'ನಾನು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರೆ, ಅಧಿಕಾರದಲ್ಲಿದ್ದು ಕೆಲಸದಲ್ಲಿ ಕೆಟ್ಟ ವರ್ತನೆ ತೋರುತ್ತಿರುವ ಮಂತ್ರಿಗಳೆಲ್ಲರನ್ನೂ ಅಧಿಕಾರದಿಂದ ವಜಾಗೊಳಿಸುತ್ತಿದ್ದೆ' ಎಂದು ಮುಲಾಯಂ ಸಿಂಗ್ ಗುಡುಗಿದ್ದಾರೆ.
ಸಮಾಜವಾದಿ ಪಕ್ಷ ಸರ್ಕಾರದ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿರುವ ಮಂತ್ರಿಗಳ ಕುರಿತಂತೆ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಅವರು, ಅಧಿಕಾರ ಸ್ವೀಕರಿಸಿರುವ ಮಂತ್ರಿಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ. ಸಮಾಜವಾದಿ ಪಕ್ಷ ರಚಿತಗೊಂಡಾಗಿನಿಂದಲೂ ನಾನು ನೀಡಿದ್ದ ಎಲ್ಲಾ ಸಲಹೆಯನ್ನು ಅಖಿಲೇಶ್ ಕಡೆಗಣಿಸಿದ್ದಾರೆ. ಅಭಿವೃದ್ಧಿ ಕೆಲಸಗಳನ್ನು ಮಾಡದ ಇಂತಹ ಮಂತ್ರಿಗಳು ಭವಿಷ್ಯದಲ್ಲಿ ಸಮಾಜವಾದಿ ಪಕ್ಷಕ್ಕೆ ಅಪಾಯವನ್ನು ತಂದೊಡ್ಡುತ್ತಾರೆ ಎಂದು ಮುಲಾಯಂ ಮಗನಿಗೆ ಎಚ್ಚರಿಕೆ ನೀಡಿದ್ದಾರೆ.
ಅಧಿಕಾರಕ್ಕೆ ಬರುವ ಸಮಯದಲ್ಲಿ ಸಮಾಜವಾದಿ ಪಕ್ಷ ನಿರಂತರ ವಿದ್ಯುತ್ ನೀಡುವುದಾಗಿ, ಅಪರಾಧ ಮುಕ್ತ ರಾಜ್ಯವಾಗಿಸುವುದಾಗಿ ಹಾಗೂ ಅಮಾಯಕ ಮುಸ್ಲಿಂ ಜನರನ್ನು ಭಯೋತ್ಪಾದನಾ ಪ್ರಕರಣದಲ್ಲಿ ಸಿಲುಕಿಸಿ ಶಿಕ್ಷಿಸುತ್ತಿರುವ ಪೊಲೀಸರಿಗೆ ಕಠಿಣ ಶಿಕ್ಷೆ ನೀಡುವುದಾಗಿ ಭರವಸೆ ನೀಡಿತ್ತು. ಆದರೆ 3 ವರ್ಷದಲ್ಲಿ ಒಂದೇ ಒಂದು ವಿದ್ಯುತ್ ಉತ್ಪಾದನಾ ಘಟಕವೂ ಏರಿಕೆಯಾಗಿಲ್ಲ. ಲಕ್ನೋದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದ್ದು, ದೇಶದ ಅಪರಾಧ ರಾಜಧಾನಿ ಆಗಿ ಮಾರ್ಪಟ್ಟಿದೆ. ಇನ್ನು ಅಮಾಯಕರನ್ನು ಭಯೋತ್ಪಾದನಾ ಪ್ರಕರಣದಲ್ಲಿ ಸಿಲುಕಿಸಿ ಶಿಕ್ಷಿಸುತ್ತಿರುವ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಬಹುಮಾನವನ್ನು ನೀಡುತ್ತಿದೆ ಎಂದು ಆರೋಪಿಸಿರುವ ಮುಲಾಯಂ, ಸಮಾಜವಾದಿ ಪಕ್ಷ ನೀಡಿದ ಭರವಸೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ. 2017ರ ಮುಂದಿನ ಚುನಾವಣೆಯಲ್ಲಿ ಸಮಾಜವಾದಿ ಪಕ್ಷಕ್ಕೆ ಜನರು ಬುದ್ಧಿ ಕಲಿಸುತ್ತಾರೆ ಎಂದು ಹೇಳಿದ್ದಾರೆ.