ಚಂಡೀಗಡ: ಮಾನಸಿಕ ಅಸ್ವಸ್ಥೆ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣ ಇದೀಗ ಸಾಮಾಜಿಕ ಜಾಣದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.
ಈ ಘಟನೆ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವಿಟರ್ ಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಈ ದುಷ್ಕೃತ್ಯವನ್ನು ವಿರೋಧಿಸಿ ಹೋರಾಟಗಾರರು, ರಾಜಕೀಯ ಗಣ್ಯರು ಹಾಗೂ ಸಾರ್ವಜನಿಕರು ಸೂಕ್ತ ಕ್ರಮ ತೆಗೆದುಕೊಳ್ಳುಬೇಕು ಎಂದು ಆಗ್ರಹಿಸಿದ್ದಾರೆ.
ನೇಪಾಳ ಮೂಲದ ಮಾನಸಿಕ ಅಸ್ವಸ್ಥೆಯ ಮೇಲೆ ಅತ್ಯಾಚಾರವೆಸಗಿ, ಕ್ರೂರವಾಗಿ ಹತ್ಯೆ ಮಾಡಿ ನಂತರ ದೇಹವನ್ನು ಕಸದ ತೊಟ್ಟಿಯಲ್ಲಿ ಬಿಸಾಡಿರುವ ಘಟನೆ ಚಂಡೀಗಡದ ಹೃದಯ ಭಾಗ ರೊಹ್ ತಕ್ ನಲ್ಲಿ ನಡೆದಿತ್ತು. ಅತ್ಯಾಚಾರಕ್ಕೊಳಗಾದ ಯುವತಿಯ ಅಕ್ಕ ಫೆ.1 ರಂದು ಪೊಲೀಸರಿಗೆ ತನ್ನ ತಂಗಿ ಕಾಣೆಯಾಗಿರುವುದಾಗಿ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುವ ವೇಳೆ ಫೆ.4 ರಂದು ಅನಾಮಿಕ ದೇಹವೊಂದು ರಸ್ತೆ ಬದಿಯಲ್ಲಿ ಬಿದ್ದಿರುವುದು ಕಂಡು ಪರಿಶೀಲನೆಗೊಳಪಡಿಸಿದ್ದಾರೆ. ನಂತರ ಕಾಣೆಯಾದ ಯುವತಿ ಈಕೆ ಎಂದು ತಿಳಿದಿದೆ. ನಂತರ ದೇಹವನ್ನು ಪರೀಕ್ಷೆಗೊಳಪಡಿಸಿದಾಗ ಹತ್ಯೆಗೂ ಮುನ್ನ ಯುವತಿಯ ಮೇಲೆ ಅತ್ಯಾಚಾರವೆಸಗಿರುವುದು ಹಾಗೂ ದೇಹದ ಒಳಗೆ ಕಲ್ಲು, ಬ್ಲೇಡ್ ಇರುವುದಾಗಿ ಕಂಡು ಬಂದಿತ್ತು.
ಪ್ರಕರಣದ ಸಂಬಂಧ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ಸುಳಿವು ನೀಡಿದ್ದ ವ್ಯಕ್ತಿಯೋರ್ವನಿಗೆ ಪೊಲೀಸರು ರು. 1 ಲಕ್ಷ ನಗದು ಬಹುಮಾನ ಘೋಷಿಸಿದ್ದಾರೆ.
ಘಟನೆ ಕುರಿತಂತೆ ನಾನು ಯಾರನ್ನೂ ದೂಷಿಸಲು ಇಷ್ಟಪಡುವುದಿಲ್ಲ. ಆದರೆ ಬಿಜೆಪಿ ಸರ್ಕಾರ ತನ್ನನ್ನು ತಾನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಮಾಜಿ ಲೋಕಸಭಾ ಸದಸ್ಯ ಪಿ.ಸಿ. ಚಾಕೋ ಹೇಳಿದ್ದಾರೆ.
ಇಂತಹ ಘಟನೆಗಳು ದೇಶಾದ್ಯಂತ ಮರುಕಳಿಸುತ್ತಿದ್ದು, ಸರ್ಕಾರ ಈಗಾಲಾದರೂ ಎಚ್ಚೆತ್ತುಕೊಂಡು ಕ್ರಮ ತೆಗೆದುಕೊಳ್ಳಬೇಕು ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಬರ್ಕಾ ಶುಕ್ಲಾ ಸಿಂಗ್ ಅವರು ಹೇಳಿದ್ದಾರೆ.
ಇದೊಂದು ಖಂಡನಾರ್ಹ ಘಟನೆಯಾಗಿದ್ದು ಬೇಟಿ ಪಡಾವ್ ಬೇಟಿ ಬಚಾವೊ ಆಂದೋಲನ ಪ್ರಾರಂಭಿಸಿದ ಹರಿಯಾಣ ಎಲ್ಲಿ ಹೋಗಿದೆ ಎಂದು ಸಮಾಜ ಹೋರಾಟಗಾರ ಅನ್ನಿ ರಾಜಾ ಹೇಳಿದ್ದಾರೆ.