ನವದೆಹಲಿ: ಪೊಲೀಸರು ನನ್ನ ದೂರನ್ನು ಗಂಭೀರವಾಗಿ ಪರಿಗಣಿಸಿ ಪ್ರಮಾಣಿಕವಾಗಿ ಕಾರ್ಯ ನಿರ್ವಹಿಸಿದ್ದರೆ ನನ್ನ ಸಹೋದರಿ ಜೀವಂತವಾಗಿರುತ್ತಿದ್ದಳು ಎಂದು ಮೃತ ಯುವತಿಯ ಸಹೋದರಿ ಹೇಳಿದ್ದಾಳೆ.
ನನ್ನ ಸಹೋದರಿ ನಾಪತ್ತೆಯಾದ ದಿನವೇ ನಾನು ಪೊಲೀಸರಿಗೆ ದೂರು ನೀಡಿದ್ದೆ. ಆದರೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದ ಪೊಲೀಸರು, ನಿಮ್ಮ ಸಹೋದರಿ ಬಹುಶಃ ಸ್ನೇಹಿತರೊಂದಿಗೆ ಹೋಗಿರಬೇಕು ಕಾದು ನೋಡಿ, ಶೀಘ್ರವೇ ಬರಬಹುದು ಎಂದು ಹೇಳಿ ನನ್ನನ್ನು ಸಾಗ ಹಾಕಿದ್ದರು. ಆದರೆ ಒಮ್ಮೆಯಾದರು ನನ್ನ ದೂರನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದ್ದರೆ ನನ್ನ ತಂಗಿ ಸಾಯುತ್ತಿರಲಿಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತಮ್ಮ ಸಹೋದರಿಯ ಸಾವಿಗೆ ಕಾರಣರಾದ ದುಷ್ಕರ್ಮಿಗಳನ್ನು ಕೂಡಲೇ ಗಲ್ಲಿಗೇರಿಸಿ ಎಂದು ಆಗ್ರಹಿಸಿದ್ದಾರೆ.
ನೇಪಾಳ ಮೂಲದ 28 ವರ್ಷದ ಯುವತಿ ವೈದ್ಯಕೀಯ ಚಿಕಿತ್ಸೆಗಾಗಿ ತನ್ನ ಸಹೋದರಿಯೊಂದಿಗೆ ರೋಹಟಕ್‌ಗೆ ಆಗಮಿಸಿದ್ದು, ಕಳೆದ ಫೆಬ್ರವರಿ 1ರಂದು ಯುವತಿ ನಾಪತ್ತೆಯಾಗಿದ್ದಳು. ಪ್ರಕರಣ ಸಂಬಂಧ ಯುವತಿಯ ಸಹೋದರಿ ಪೊಲೀಸರಲ್ಲಿ ದೂರು ನೀಡಿದ್ದರು. ಆದರೆ ಫೆಬ್ರವರಿ 4ರಂದು ರೋಹಟಕ್ ಹೊರವಲಯದಲ್ಲಿ ಯುವತಿಯ ಮೃತ ದೇಹ ಪತ್ತೆಯಾಗಿತ್ತು. ಯುವತಿಯನ್ನು ಅತ್ಯಾಚಾರ ಗೈದು, ಭೀಕರವಾಗಿ ಹತ್ಯೆ ಮಾಡಿ ರಸ್ತೆಬದಿಯಲ್ಲಿ ಬಿಸಾಡಲಾಗಿತ್ತು. ಮೃತ ದೇಹವನ್ನು ಬೀದಿ ನಾಯಿಗಳು ಮತ್ತು ಇಲಿಗಳು ಕಚ್ಚಿ ತಿಂದಿದ್ದು, ಯುವತಿಯ ಬಹುತೇಕ ಭಾಗಗಳೇ ನಾಪತ್ತೆಯಾಗಿದ್ದವು.
ದೆಹಲಿಯಲ್ಲಿ ನಡೆದಿದ್ದ ನಿರ್ಭಯಾ ಪ್ರಕರಣವನ್ನು ಮೀರಿಸುವಂತೆ ಅತ್ಯಾಚಾರಿಗಳು ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದು, ಆಕೆಯ ಗುಪ್ತಾಂಗಕ್ಕೆ ಮಡಕೆ ಚೂರು, ಕಲ್ಲಿನ ಚೂರು ಮತ್ತು ಕಾಂಡೋಮ್‌ಗಳನ್ನು ತುರುಕಿರುವುದು ಮರಣೋತ್ತರ ಪರೀಕ್ಷೆ ವೇಳೆ ಬೆಳಕಿಗೆ ಬಂದಿದೆ.