ನವದೆಹಲಿ: ಫೆ. 18ರಿಂದ 22ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಏರ್‍ಷೋನಲ್ಲಿ ಸುಮಾರು 300 ವಿದೇಶಿ ಕಂಪನಿಗಳು ಪಾಲ್ಗೊಳ್ಳಲಿವೆ. ಜತೆಗೆ, ವಿವಿಧ ರಾಷ್ಟ್ರಗಳ 54 ಸಚಿವರ ಮತ್ತು ಉನ್ನತ ಮಟ್ಟದ ನಿಯೋಗಗಳೂ ಏರೋ ಇಂಡಿಮಾ ಪ್ರದರ್ಶನದಲ್ಲಿ ಭಾಗವಹಿಸಲಿವೆ.
ಇದು ಭಾರತವು ವಿಶ್ವದ ಅತಿದೊಡ್ಡ ರಕ್ಷಣಾ ಮಾರುಕಟ್ಟೆಯಾಗಿ ಬದಲಾಗುತ್ತಿರುವುದರ ಸಂಕೇತವಾಗಿದೆ. `ಮೇಕ್ ಇನ್ ಇಂಡಿಯಾ' ಘೋಷಣೆಯಡಿ ನಡೆಯಲಿರುವ ಈ ವರ್ಷದ ಏರೋ ಇಂಡಿಯಾ ಷೋವನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಉದ್ಘಾಟಿಸಲಿದ್ದಾರೆ.
ವೈಮಾನಿಕ, ರಕ್ಷಣೆ ಮತ್ತು ನಾಗರಿಕ ವಿಮಾನಯಾನ ಮಾತ್ರವಲ್ಲದೆ, ರಕ್ಷಣಾ ಉತ್ಪಾದನೆ ಮತ್ತು ವಿಮಾನನಿಲ್ದಾಣ ಮೂಲಸೌಕರ್ಯ ಕ್ಷೇತ್ರಗಳಿಗೂ ಈ ಬಾರಿ ಆದ್ಯತೆ ನೀಡಲಾಗಿದೆ. ಅಮೆರಿಕದ 64 ಕಂಪನಿಗಳು, ಫ್ರಾಸ್‍ನ 58, ಬ್ರಿಟನ್‍ನ 48, ರಷ್ಯಾದ 41, ಇಸ್ರೇಲ್‍ನ 25, ಜರ್ಮನಿಯ 17 ಕಂಪನಿಗಳು ಸೇರಿದಂತೆ ವಿದೇಶಗಳ 328 ಕಂಪನಿಗಳು ಮತ್ತು ಭಾರತದ 295 ಕಂಪನಿಗಳು ಏರ್‍ಷೋನಲ್ಲಿ ಪಾಲ್ಗೊಳ್ಳಲಿವೆ.
ಇದೇ ವೇಳೆ, ವಿವಿಐಪಿ ಕಾಪ್ಟರ್ ಹಗರಣದಲ್ಲಿ ಸಿಲುಕಿಕೊಂಡಿದ್ದ ಫಿನ್‍ಮೆಕ್ಯಾನಿಕಾ ಕಂಪನಿಯೂ ಭಾಗವಹಿಸಲಿದೆ. ಕಳೆದ ವರ್ಷದ ಪ್ರದರ್ಶನದಲ್ಲಿ 156 ಭಾರತೀಯ ಕಂಪನಿಗಳು ಹಾಗೂ 210 ವಿದೇಶಿ ಕಂಪನಿಗಳು ಪಾಲ್ಗೊಂಡಿದ್ದವು. ಇದು ಏಷ್ಯಾದಲ್ಲೇ ನಡೆಯುತ್ತಿರುವ ಅತಿದೊಡ್ಡ ಏರ್ ಷೋ ಎಂದಿರುವ ರಕ್ಷಣಾ ಉತ್ಪಾದನೆ ಕಾರ್ಯದರ್ಶಿ ಜಿ. ಮೋಹನ್ ಕುಮಾರ್, ನಾವು ಮೇಕ್ ಇನ್ ಇಂಡಿಯಾವನ್ನೇ ಪ್ರದರ್ಶನದ ಪ್ರಮುಖ ಥೀಮ್ ಅನ್ನಾಗಿ ಇಟ್ಟುಕೊಂಡಿದ್ದೇವೆ. ರಕ್ಷಣಾ ಕ್ಷೇತ್ರದಲ್ಲೂ ಮೇಕ್ ಇನ್ ಇಂಡಿಯಾ ಪ್ರಗತಿ ಸಾಧಿಸಲಿ ಎನ್ನುವುದೇ ನಮ್ಮ ಉದ್ದೇಶ ಎಂದಿದ್ದಾರೆ.