ನವದೆಹಲಿ: ದೆಹಲಿ ಜನತೆ ಸರಿಯಾದ ಆಯ್ಕೆ ಮಾಡಿದ್ದಾರೆ ಎನ್ನುವುದರ ಮೂಲಕ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅರವಿಂದ್ ಕೇಜ್ರಿವಾಲ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.
ದೆಹಲಿ ವಿಧಾನಸಭೆಯಲ್ಲಿ ಆಮ್ ಆದ್ಮಿ ಪಕ್ಷ(ಎಎಪಿ) ಗೆಲವು ಸಾಧಿಸುವುದು ಬಹುತೇಕ ಖಚಿತವಾದ ಹಿನ್ನಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಣ್ಣಾ ಹಜಾರೆ, ಅರವಿಂದ ಕೇಜ್ರಿವಾಲ್ ದೆಹಲಿ ಜನರ ವಿಶ್ವಾಸ ಗೆದ್ದಿದ್ದಾರೆ. ಹಾಗಾಗಿ, ಕೇಜ್ರಿವಾಲ್‌ರನ್ನ ಮತದಾರರು ಗೆಲ್ಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಗೆಲುವು ದೆಹಲಿ ಜನತೆಯ ಗೆಲುವಾಗಿದೆ. ಕೇಜ್ರಿವಾಲ್ ಜನರ ಪರ ಹೋರಾಟ ಮಾಡ್ತಾರೆ ಅನ್ನೋ ನಂಬಿಕೆ ಮತದಾರರಿಗೆ ಇತ್ತು. ಮೊದಲಿನಿಂದಲೂ ನಮ್ಮ ಜತೆ ಕೇಜ್ರಿವಾಲ್ ಹೋರಾಟ ಮಾಡುತ್ತಾ ಬಂದಿದ್ದರು. ಭ್ರಷ್ಟಾಚಾರದ ವಿರುದ್ಧ ನಮ್ಮ ಜತೆ ಸೇರಿ ದನಿ ಎತ್ತಿದ್ದರು. ಕೇಜ್ರಿವಾಲ್ ಹೋರಾಟವನ್ನ ಮರೆಯಬಾರದು ಎಂದು ಹಜಾರೆ ತಿಳಿಸಿದ್ದಾರೆ.
ಆಪ್ ಗೆಲುವಿಗೆ ಅರವಿಂದ್ ಕೇಜ್ರಿವಾಲ್‌ಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದ ಅವರು ಕೇಜ್ರಿವಾಲ್ ಮತ್ತೆ ಈ ಹಿಂದಿನಂತೆ ತಪ್ಪು ಮಾಡುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಇನ್ನೂ ಬಿಜೆಪಿಗೆ ಭಾರೀ ಹಿನ್ನಡೆಯಾಗಿರುವುದಕ್ಕೆ ಪ್ರತಿಕ್ರಯಿಸಿದ ಅಣ್ಣಾ, ಬಿಜೆಪಿ ಸೋಲಿಗೆ ಕಿರಣ್ ಬೇಡಿ ಕಾರಣರಲ್ಲ ಎಂದು ತಿಳಿಸಿದ್ದಾರೆ.