ನವದೆಹಲಿ: ಬೆಂಗಳೂರು ಮೂಲದ ಬಿಡ್ ಆ್ಯಂಡ್ ಹ್ಯಾಮರ್ ಹರಾಜು ಸಂಸ್ಥೆಯು ಮಾರಾಟ ಮಾಡಿದ್ದ ರಾಜಾ ರವಿವರ್ಮನ ಕಲಾಕೃತಿಯು ನಕಲಿಯಲ್ಲ, ಅಸಲಿ ಎಂದು ಕರ್ನಾಟಕ ಹೈಕೋರ್ಟ್ ನೇಮಕ ಮಾಡಿದ್ದ ಮಧ್ಯಸ್ಥಿಕೆದಾರರು ವರದಿ ನೀಡಿದ್ದಾರೆ.
ಜತೆಗೆ, ಕಲಾಕೃತಿಯನ್ನು ಖರೀದಿಸಿರುವ ಕಿರಣ್ ನಾದರ್ ನೇತೃತ್ವದ ಕಂಪನಿಯು ಬಿಡ್ ಆ್ಯಂಡ್ ಹ್ಯಾಮರ್ ಹರಾಜು ಸಂಸ್ಥೆಗೆ ಬಾಕಿಯಿರುವ ರು. 79 ಲಕ್ಷವನ್ನು ಪಾವತಿಸಬೇಕು ಎಂದೂ ಹೇಳಿದ್ದಾರೆ.
ಅಷ್ಟೇ ಅಲ್ಲ, 2 ತಿಂಗಳೊಳಗೆ ಬಾಕಿ ಹಣ ಪಾವತಿಸದೇ ಇದ್ದಲ್ಲಿ, ಇನ್‍ವಾಯ್ಸ್ ಹೊರಡಿಸಿದ ದಿನಾಂಕದಿಂದ ಅಂತಿಮ ಬಾಕಿ ನೀಡಿದ ದಿನಾಂಕದವರೆಗೆ ಬಿಡ್ ಆ್ಯಂಡ್ ಹ್ಯಾಮರ್‍ಗೆ ಶೇ.12 ಬಡ್ಡಿ ದರವನ್ನೂ ನೀಡಬೇಕು ಎಂದೂ ನಾದರ್‍ಗೆ ಸೂಚಿಸಲಾಗಿದೆ.
ಚೆನ್ನೈನ ಎಸ್‍ಕೆಎನ್ ಇನ್‍ವೆಸ್ಟ್‍ಮೆಂಟ್ ಕಂಪನಿಯು ರಾಜಾ ರವಿವರ್ಮನ `ಜಟಾಯು ವಧಂ' ಕಲಾಕೃತಿಯನ್ನು ಖರೀದಿಸಿತ್ತು. ಆದರೆ, ತಜ್ಞರೊಬ್ಬರ ತಾಂತ್ರಿಕ ವರದಿಯನ್ನು ನೋಡಿದ ಬಳಿಕ ಆ ಕಲಾಕೃತಿಯ ಅಸಲಿತನದ ಬಗ್ಗೆ ಪ್ರಶ್ನೆಯೆತ್ತಿತ್ತು.
ಈ ಹಿನ್ನೆಲೆಯಲ್ಲಿ ವಿವಾದ ಪರಿಹರಿಸುವಂತೆ ಕೋರಿ ಬಿಡ್ ಆ್ಯಂಡ್ ಹ್ಯಾಮರ್ ಸಂಸ್ಥೆಯು ಕರ್ನಾಟಕ ಹೈಕೋರ್ಟ್‍ನ ಮೆಟ್ಟಿಲೇರಿತ್ತು. ಅರ್ಜಿ ಕೈಗೆತ್ತಿಕೊಂಡ ನ್ಯಾಯಾಲಯ, ಕರ್ನಾಟಕ ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಆರ್. ಗುರುರಾಜನ್ ಅವರನ್ನು ಮಧ್ಯಸ್ಥಿಕೆದಾರನನ್ನಾಗಿ ನೇಮಿಸಿ, ಕಲಾಕೃತಿ ಅಸಲಿಯೋ, ನಕಲಿಯೋ ಎಂಬ ಬಗ್ಗೆ ವರದಿ ನೀಡುವಂತೆ ಹೇಳಿತ್ತು.