ಕೊಟ್ಟಾಯಮ್: ಚಿಕ್ಕಮಗಳೂರು ಮಾದರಿಯಲ್ಲೇ ಕೇರಳ ತಮಿಳುನಾಡು ಗಡಿ ಗ್ರಾಮಗಳಲ್ಲಿ ಇಬ್ಬರನ್ನು ಕೊಂದು ಭಯ ಹುಟ್ಟಿಸಿರುವ ನರಭಕ್ಷ ಹುಲಿಯೊಂದನ್ನು ಜೀವಂತ ಸೆರೆ ಅಥವಾ ಗುಂಡಿಕ್ಕಿ ಕೊಲ್ಲುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಸೋಮವಾರ ಆರಂಭಿಸಿದೆ.
ಈ ಕಾರ್ಯಾಚರಣೆಯಲ್ಲಿ ಕೇರಳ ಮಾತ್ರವಲ್ಲದೆ, ತಮಿಳು ನಾಡು ಮತ್ತು ಕರ್ನಾಟಕದ ಅರಣ್ಯ ಇಲಾಖೆ ಸಿಬ್ಬಂದಿಯೂ ಪಾಲ್ಗೊಂಡಿದ್ದಾರೆ. ಹುಲಿ ಕೊನೆಯ ಬಾರಿಗೆ ಬಿದಿರ್‍ಕಾಡು ಗ್ರಾಮದಿಂದ 15 ಕಿ.ಮೀ. ದೂರದ ಪೆನ್ನಾ ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು. ಹಾಗಾಗಿ 50 ಮಂದಿಯ ಎಸ್ಟಿಎಫ್ ತಂಡ ಕಾರ್ಯಾಚರಣೆಗಿಳಿದಿದೆ.
ಕೇರಳದ ವೈನಾಡಿನ ಟೀ ಎಸ್ಟೇಟ್‍ವೊದಂರಲ್ಲಿ ಭಾನುವಾರ ಈ ಹುಲಿ ಮಹಿಳೆಯೊಬ್ಬಳನ್ನು ಕೊಂದು ಹಾಕಿತ್ತು. ವಾರವೊಂದರಲ್ಲಿ ಈ ಹುಲಿ ಮನುಷ್ಯರ ಮೇಲೆರಗಿದ ಎರಡನೇ ಪ್ರಕರಣ ಇದು. ಇಲ್ಲಿಂದ 5 ಕಿ.ಮೀ. ದೂರದಲ್ಲಿ ಈ ಹುಲಿ ಇದೇ ರೀತಿ ವ್ಯಕ್ತಿಯೊಬ್ಬನನ್ನು ಕೊಂದಿತ್ತು. ಈ ಕಾರಣದಿಂದ ಕೈತಾ, ಪಟ್ಟಾವಾಯಲ್ ಮತ್ತು ಬಿದಿರ್ ಕಾಡು ಗ್ರಾಮಗಳಲ್ಲಿ 3 ದಿನ ನಿಷೇಧಾಜ್ಞೆ ಜಾರಿ ಗೊಳಿಸಲಾಗಿದ್ದು, ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಕರ್ನಾಟಕ ಗಡಿ ಕೂಡ ಈ ಪ್ರದೇಶಗಳಿಗೆ ಸಮೀಪದಲ್ಲೇ ಇದೆ. ಹಾಗಾಗಿ ಕರ್ನಾಟಕದ ಅರಣ್ಯ ಅಧಿಕಾರಿಗಳನ್ನೂ ಈ ಕಾರ್ಯಾಚರಣೆಗೆ ನೆರವು ನೀಡುವಂತೆ ಕೇಳಲಾಗಿದೆ.