ದೇಶ

ರು. 31,000 ತಗೊಳ್ಳಿ ಅತ್ಯಾಚಾರ ಮರೆತುಬಿಡಿ!

ಪಟನಾ: ಈ ಕಾಲದಲ್ಲೂ ಇಂಥದ್ದೊಂದು ಘಟನೆ ನಡೆದಿದೆಯೆಂದರೆ ನಂಬಲಸಾಧ್ಯ. ಅತ್ಯಾಚಾರಕ್ಕೊಳಗಾದ ಮಹಿಳೆಗೆ ಸಾಂತ್ವನ ಹೇಳಿ ನ್ಯಾಯ ಕೊಡಿಸುವ ಬದಲು ಆರೋಪಿ ಮಹಿಳೆಗೆ ರು. 31,000 ಕೊಡಲು ಹೇಳಿ ಅತ್ಯಾಚಾರ ಮರೆತುಬಿಡಿ ಎಂದು ಪಂಚಾಯಿತಿ ಯೊಂದು ತೀರ್ಪು ನೀಡಿದೆ. ಬಿಹಾರದ ನವಾಡ ಜಿಲ್ಲೆಯಲ್ಲಿ ಇಂಥ ಹೇಯ ಘಟನೆ ನಡೆದಿದೆ.

ಅತ್ಯಾಚಾರವೆಸಗಿದ ವ್ಯಕ್ತಿ ಜಿಲ್ಲೆಯ ಪ್ರಭಾವಿ ಕುಟುಂಬಕ್ಕೆ ಸೇರಿದವನಾಗಿರುವುದರಿಂದ ಇಂಥ ತೀರ್ಪನ್ನು ಕೊಡಲಾಗಿದೆ ಎಂದು ಹೇಳಲಾಗಿದೆ. ಆದರೆ ಆ ವ್ಯಕ್ತಿಯ ಮಹಿಳೆ ಬೆದರಿಕೆ ಹಾಕಿರುವ ವಿಚಾರ ಕೂಡ ಬೆಳಕಿಗೆ ಬಂದಿದೆ. ಇದರ ಜತೆಗೆ ಪಂಚಾಯಿತಿ ರು. 31 ಸಾವಿರ ಪರಿಹಾರ ನೀಡಬೇಕೆಂದು ಹೇಳಿದ್ದರೂ ಅತ್ಯಾಚಾರ ಎಸಗಿದ ವ್ಯಕ್ತಿ ಅದನ್ನು ಕೊಡಲು ನಿರಾಕರಿಸಿದ್ದಾನೆ. ಜತೆಗೆ ಮಹಿಳೆಗೆ ಬೆದರಿಕೆ ಹಾಕಿದ್ದಾನೆ.ಈ ಹಿನ್ನೆಲೆಯಲ್ಲಿ ಆಕೆಯ ಕುಟುಂಬ ದೂರು ದಾಖಲಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಬಗ್ಗೆ ಮಾತನಾಡಿರುವ ಮಹಿಳೆಯ ತಂದೆ, `ಪೊಲೀಸರು ಪ್ರಕರಣವನ್ನು ದಾಖಲು ಮಾಡಿಸಿಕೊಳ್ಳಲು ಹಿಂಜರಿದರು ಆದರೆ ಸ್ಥಳೀಯ ಮಾಧ್ಯಮಗಳು ಈ ಬಗ್ಗೆ ಪ್ರಶ್ನಿಸಿದ ನಂತರ ಪ್ರಕರಣ ದಾಖಲಾಯಿತು' ಎಂದರು. ಮಹಿಳೆ ರಾತ್ರಿ ವೇಳೆ ಬಹಿರ್ದೆಸೆಗೆ ತೆರಳಿದ್ದಾಗ ಆಕೆಯನ್ನು ಹೊತ್ತೊಯ್ದು ವ್ಯಕ್ತಿ ಎರಡು ದಿನಗಳ ಕಾಲ ಅತ್ಯಾಚಾರವೆಸಗಿದ್ದ.

SCROLL FOR NEXT