ನವದೆಹಲಿ/ಭೋಪಾಲ್: ಅರಣ್ಯರಕ್ಷಕರ ಅಕ್ರಮ ನೇಮಕ ಆರೋಪ ಎದುರಿಸುತ್ತಿರುವ ಮಧ್ಯಪ್ರದೇಶ ರಾಜ್ಯಪಾಲ ರಾಮ್ ನರೇಶ್ ಯಾದವ್ ಬುಧವಾರ ರಾಜಿನಾಮೆ ಸಲ್ಲಿಸಿದ್ದಾರೆ. ಈ ರೀತಿ ರಾಜಿನಾಮೆ ಸಲ್ಲಿಸುತ್ತಿರುವ ಮೊದಲ ರಾಜ್ಯಪಾಲ ಅವರು.
ಹಲವು ರಾಜಕಾರಣಿಗಳು, ಹಿರಿಯ ಅಧಿಕಾರಿಗಳು, ಉದ್ಯಮಿಗಳು ಭಾಗಿಯಾಗಿದ್ದಾರೆನ್ನಲಾದ ಮಧ್ಯಪ್ರದೇಶ ವೃತ್ತಿಪರ ಪರೀಕ್ಷಾ ಮಂಡಳಿ (ಎಂಪಿಪಿಇಬಿ) ಹಗರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವರುವ ಎಸ್‍ಐಟಿ ರಾಜ್ಯಪಾಲ ಸೇರಿ ಹಲವರ ವಿರುದ್ಧ ಮಂಗಳ-ವಾರ ಎಫ್ ಐಆರ್ ದಾಖಲಿಸಿತ್ತು. ಹೀಗಾಗಿ ಕೇಂದ್ರ ಗೃಹ ಸಚಿವಾಲಯ ನರೇಶ್‍ಗೆ ತ್ಯಾಗಪತ್ರ ಸಲ್ಲಿಸುವಂತೆ ಸೂಚಿಸಿತ್ತು. ಜತೆಗೆ ಗುತ್ತಿಗೆ ಶಿಕ್ಷಕರ ನೇಮಕ ಪರೀಕ್ಷೆ ಹಗರಣದಲ್ಲಿ ನರೇಶ್ ಪುತ್ರ ಶೈಲೇಶ್ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಉತ್ತರ ಪ್ರದೇಶದ ಮಾಜಿ ಸಿಎಂ ನರೇಶ್ ರನ್ನು ಯುಪಿಎ ಅವಧಿಯಲ್ಲಿ 2011ರಲ್ಲಿ ರಾಜ್ಯಪಾಲರನ್ನಾಗಿ ನೇಮಿಸಲಾಗಿತ್ತು. ಸೆಪ್ಟೆಂಬರ್‍ಗೆ ಅವರ ಸೇವಾವಧಿ ಮುಕ್ತಾಯ ಗೊಳ್ಳುತ್ತಿತ್ತು.
ಆರೋಪ ಏನು?
2012ರಲ್ಲಿ ಅರಣ್ಯ ರಕ್ಷಕರ ಹುದ್ದೆ ನೇಮಕ ಪ್ರಕ್ರಿಯೆಗೆ ಸಂಬಂಧಿಸಿ ರಾಜ್ಯಪಾಲರು ಐವರ ಹೆಸರು ಶಿಫಾರಸು ಮಾಡಿದ್ದರು. ಈ ಮೂವರು ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗುವಂತೆ ನೋಡಿಕೊಳ್ಳಬೇಕೆಂದು ಎಂಪಿಪಿಇಬಿ ಪರೀಕ್ಷೆ ಅಕ್ರಮದಲ್ಲಿ ತೊಡಗಿದ್ದವರಿಗೆ ಸೂಚಿಸಿದ್ದರು. ಈ ಕುರಿತ ಶಿಫಾರಸಿಗಾಗಿ ಅವರು ತಮ್ಮ ಅಧಿಕೃತ ಲೆಟರ್ ಹೆಡ್ ಅನ್ನೇ ಬಳಸಿದ್ದರು. ಈ ಹಗರಣ ಫೆ.20ರಂದು ಮಧ್ಯಪ್ರದೇಶ ಹೈಕೋರ್ಟ್‍ನಲ್ಲಿ ವಿಚಾರಣೆಗೆ ಬಂದಿತ್ತು.
ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ಎಫ್ಐಆರ್ ದಾಖಲಿಸಲು ಎಸ್ಟಿಎಫ್ ಸ್ವತಂತ್ರ ಎಂದು ಕೋರ್ಟ್ ಹೇಳಿತ್ತು.