ಇಸ್ಲಾಮಾಬಾದ್: ಗುಜರಾತ್‌ನ ಪೋರಬಂದರ್‌ನಲ್ಲಿ ಸ್ಫೋಟಕಗಳಿಂದ ತುಂಬಿದ್ದ ಪಾಕಿಸ್ತಾನದ ಮೀನುಗಾರಿಕಾ ದೋಣಿ ಸ್ಫೋಟಗೊಂಡಿದೆ ಎಂದು ಭಾರತ ನೀಡಿರುವ ವರದಿಯನ್ನು ಪಾಕಿಸ್ತಾನ ತಿರಸ್ಕರಿಸಿದೆ.
ಗುಜರಾತ್‌ನ ಪೋರಬಂದರ್‌ನಿಂದ ಸುಮಾರು 365 ಕಿ.ಮೀ ದೂರದಲ್ಲಿ ಈ ದೋಣಿಯನ್ನು ಮೊದಲ ಬಾರಿಗೆ ಪತ್ತೆ ಭಾರತದ ಕರಾವಳಿ ಕಾವಲು ಪಡೆ. ಆಗ ಅದು ಜಲಗಡಿಯಿಂದ ಭಾರತ ಸಮುದ್ರ ವ್ಯಾಪ್ತಿಯಲ್ಲಿ ಎಂಟು ಕಿ.ಮೀ ಒಳಗೆ ನಿಧಾನವಾಗಿ ಚಲಿಸುತ್ತಿತ್ತು. ಈ ವೇಳೆ ಭಾರತದ ವಿಮಾನಗಳು ದೋಣಿ ಮೇಲೆ ನಿಗಾ ಇಟ್ಟಿದ್ದವು. ರಾತ್ರಿ 11.30ರ ಸುಮಾರಿಗೆ ಭಾರತ-ಪಾಕಿಸ್ತಾನ ಜಲಗಡಿಯಲ್ಲಿ ಕರಾವಳಿ ಕಾವಲು ಪಡೆ ಈ ಹಡಗನ್ನು ತಡೆಯಿತು.
ಸರಕಿನ ತಪಾಸಣೆ ನಡೆಸುವುದಕ್ಕಾಗಿ ಅದನ್ನು ನಿಲ್ಲಿಸುವಂತೆ ಸೂಚಿಸಲಾಯಿತು. ಆಗ ದೋಣಿಯಲ್ಲಿನ ದೀಪಗಳು ಆರಿದವು. ಪಾಕ್ ದೋಣಿ ನಿಲ್ಲುವ ಪದಲು ವೇಗ ಹೆಚ್ಚಿಸಿಕೊಂಡು ಪಾಕ್ ಗಡಿಯತ್ತ ಪರಾರಿಯಾಗಲು ಯತ್ನಿಸಿತು. ನಂತರ ಆ ಹಡಗು ಸ್ಫೋಟಗೊಂಡಿದೆ ಎಂದು ಭಾರತ ವರದಿ ಮಾಡಿತ್ತು.
ಇದನ್ನು ತಳ್ಳಿ ಹಾಕಿರುವ ಪಾಕ್ ಸರ್ಕಾರ, ಭಾರತ ಮಾಡಿರುವ ಆರೋಪಗಳು ಸುಳ್ಳು ಎಂದಿದೆ. ಪಾಕಿಸ್ತಾನದ ಗಡಿಯಲ್ಲಿ ಯಾವುದೇ ಹಡುಗು ಚಲಿಸಿದರು ಪಾಕ್ ಬಳಿ ಮಾಹಿತಿ ಇರುತ್ತದೆ. ಪಾಕಿಸ್ತಾನಕ್ಕೆ ಕಳಂಕ ತರಲೆಂದೇ ಭಾರತ ಸುಳ್ಳು ವರದಿ ರಚಿಸಿದೆ ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿಯ ವಕ್ತಾರ ತಸ್‌ನೀಮ್ ಅಸ್ಲಾಂ ಹೇಳಿದ್ದಾರೆ.