ದೇಶ

ವಿಮಾನ ದುರಂತದಲ್ಲಿ ಬದುಕುಳಿದ 7ವರ್ಷದ ಬಾಲೆ

ವಾಷಿಂಗ್ಟನ್: ಅಮೇರಿಕಾದ ಕೆಂಟಕಿ ರಾಜ್ಯದಲ್ಲಿ ಸಂಭವಿಸಿದ ಖಾಸಗಿ ವಿಮಾನ ದುರಂತದಲ್ಲಿ ನಾಲ್ವರು ಸಾವನ್ನಪ್ಪಿದ್ದು, 7 ವರ್ಷದ ಬಾಲಕಿಯೊಬ್ಬಳು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾಳೆ.

ವಿಮಾನ ಅಪಘಾತ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ್ದ ಪೊಲೀಸರು ಅವಶೇಷಗಳಡಿ ಸಿಲುಕಿದ್ದ ಮೃತ ದೇಹಗಳನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದು, ಮೃತರನ್ನು ಮಾರ್ಟಿ ಗಟ್ಜ್‌ಲರ್(49), ಕಿಮ್‌ಬರ್ಲಿ ಗಟ್ಜ್‌ಲರ್(45), ಪಿಪರ್ ಗಟ್ಜ್‌ಲರ್ (9), ಸೆರ್ರಾ ವಿಲ್ಡರ್(14) ಎಂದು ಗುರುತಿಸಲಾಗಿದೆ.

ವಿಮಾನದ ಎಂಜಿನ್‌ನಲ್ಲಿ ಸಮಸ್ಯೆ ಉಂಟಾಗಿ ಇಂಧನ ಸೋರಿಕೆಯುಂಟಾಗಿದ್ದು, ಇದರಿಂದ ನಿಯಂತ್ರಣ ತಪ್ಪಿದ ವಿಮಾನ ಎಟಿಸಿ ಗೋಪುರದ ಸಂಪರ್ಕ ಕಳೆದುಕೊಂಡಿದೆ. ಬಳಿಕ ಕೆಂಟಕಿ ಬಳಿ ದುರಂತಕ್ಕೀಡಾಗಿದೆ. ಘಟನೆಯಲ್ಲಿ ವಿಮಾನದಲ್ಲಿದ್ದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದು, ಅದೇ ಕುಟುಂಬದ 7 ವರ್ಷದ ಬಾಲೆಯೊಬ್ಬಳು ಆಶ್ಚರ್ಯಕರ ರೀತಿಯಲ್ಲಿ ಬದುಕಿದ್ದಾಳೆ ಎನ್ನಲಾಗುತ್ತಿದೆ.

ದುರ್ಘಟನೆ ನಡೆದು ಅರ್ಧಘಂಟೆ ಕಳೆಯುತ್ತಿದ್ದಂತೆ ಲಿಯಾನ್ ಕೌಂಟಿ ಪ್ರದೇಶದ ಮನೆಯೊಂದರ ಬಾಗಿಲು ತಟ್ಟಿದ 7 ವರ್ಷದ ಬಾಲಕಿ ತಾನಿದ್ದ ವಿಮಾನ ಅಪಘಾತಕ್ಕೀಡಾಗಿದ್ದು, ತನ್ನ ಪೋಷಕರು ಸಾವನ್ನಪ್ಪಿದ್ದಾರೆ ಎಂದು ತನ್ನ ಅಳಲು ತೋಡಿಕೊಂಡಿದ್ದಾಳೆ. ಬಳಿಕ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಬಾಲಕಿಯ ಸ್ಥಿತಿ ಕಂಡು ಭಯಭೀತಗೊಂಡ ಮನೆಯವರು ಪೊಲೀಸರಿಗೆ ಕರೆ ಮಾಡಿ ಸುದ್ದಿ ತಿಳಿಸಿದ್ದಾರೆ. ನಂತರ ಗಾಯಗೊಂಡಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸುದ್ದಿ ತಿಳಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

SCROLL FOR NEXT