ನವದೆಹಲಿ: ಮಹಿಳೆಯರ ಮೇಲೆ ನಡೆಯುವ ಗಂಭೀರ ಅಪರಾಧ ಪ್ರಕರಣಗಳ ತನಿಖೆಗಾಗಿ 150 ವಿಶೇಷ ತನಿಖಾ ಘಟಕಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಅತ್ಯಾಚಾರ, ವರದಕ್ಷಿಣೆ ಕಿರುಕುಳ, ಆ್ಯಸಿಡ್ ದಾಳಿ, ಮಾನವ ಕಳ್ಳಸಾಗಣೆ ಸೇರಿದಂತೆ ಮಹಿಳೆಯ ಮೇಲೆ ನಡೆಯುವ ಘೋರ ಅಪರಾಧಗಳ ತನಿಖೆಗೆ ದೇಶದಲ್ಲಿ ಅಪರಾಧ ಹೆಚ್ಚಿರುವ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಈ ಘಟಕ ಸ್ಥಾಪಿಸಲಾಗುವುದೆಂದು ತಿಳಿಸಿದೆ.
ಯೋಜನೆ ಪ್ರಕಾರ, ಪ್ರತಿ ರಾಜ್ಯದ ಶೇ.20ರಷ್ಟು ಜಿಲ್ಲೆಗಳಲ್ಲಿ 50:50 ವೆಚ್ಚ ಹಂಚಿಕೆಯ ಮೂಲಕ ವಿಶೇಷ ತನಿಖಾ ಘಟಕ ಸ್ಥಾಪಿಸುವ ಪ್ರಸ್ತಾಪವನ್ನು ಕೇಂದ್ರ ಗೃಹ ಸಚಿವಾಲಯ ಇಟ್ಟಿದೆ. ಈ ಬಗ್ಗೆ ಎಲ್ಲ ರಾಜ್ಯಗಳ ಸಿಎಂಗಳಿಗೆ ಪತ್ರ ಬರೆದಿರುವ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್, ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳ ಬಗ್ಗೆ ತ್ವರತಿಗತಿ ತನಿಖೆ ನಡೆಸುವುದು ಈ ಘಟಕಗಳ ಉದ್ದೇಶ. ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬಿ, ದೂರು ನೀಡುವಂತೆ ಪ್ರೇರೇಪಿಸಲಿದೆ ಎಂದೂ ಹೇಳಿದ್ದಾರೆ.